“ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡುದಾರರ ಪೈಕಿ 22.63 ಲಕ್ಷ ಅನರ್ಹರನ್ನು ಗುರುತಿಸಿದ್ದು, ಪಟ್ಟಿಯನ್ನು ಪರಿಷ್ಕರಿಸಲು ಯೋಜಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಈ ವರ್ಷದ ಆಗಸ್ಟ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 22,62,482 ಅನರ್ಹ ಬಿಪಿಎಲ್ ಕಾರ್ಡುದಾರರು ಪತ್ತೆಯಾಗಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲೇ ಆಹಾರ ಇಲಾಖೆಗೆ ಇ ಗವರ್ನೆನ್ಸ್ ಇಲಾಖೆ ಈ ಮಾಹಿತಿ ಕೊಟ್ಟಿದೆ. ಇದೇ ಮಾಹಿತಿ ಇಟ್ಟುಕೊಂಡೇ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳ ರದ್ದಾಗಲಿದೆಯೇ ಎಂಬ ಅನುಮಾನ ಈಗ ಮೂಡಿದೆ.
ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಆಹಾರ ಧಾನ್ಯ ವಿತರಣೆ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯೊಬ್ಬರಿಗೆ ಮಾಸಿಕ 2,000 ರೂ. ನೀಡಲಾಗುತ್ತಿದೆ. ಬಿಪಿಎಲ್ ರದ್ದಾದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ
. ಅನರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಕ್ರಮವನ್ನು ಸಮರ್ಥಿಸಿಕೊಂಡ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಎಚ್ ಮುನಿಯಪ್ಪ ಅವರು, ದಕ್ಷಿಣದ ರಾಜ್ಯಗಳು ಸಾಮಾನ್ಯವಾಗಿ ತಮ್ಮ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡುದಾರರನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಂತರ ಅತಿ ಹೆಚ್ಚು ತೆರಿಗೆ ಆದಾಯ ತರುವ ರಾಜ್ಯವಾಗಿರುವ ಕರ್ನಾಟಕದಲ್ಲಿ ಶೇ.75 ರಿಂದ 80ರಷ್ಟು ಜನಸಂಖ್ಯೆ ಬಿಪಿಎಲ್ ಪಟ್ಟಿಯಲ್ಲಿದ್ದು, ಇದು ಅವಾಸ್ತವಿಕವಾಗಿದೆ. ಆದ್ದರಿಂದ ಈ ಕಾರ್ಡ್‌ಗಳನ್ನು ರದ್ದುಪಡಿಸಬೇಕು ಎಂದು ಮುನಿಯಪ್ಪ ಹೇಳಿದ್ದಾರೆ. ಬಿಪಿಎಲ್ ಕಾರ್ಡ್‌ಗಳನ್ನು ಸಂಪೂರ್ಣ ರದ್ದುಗೊಳಿಸುವುದಿಲ್ಲ. ಆದರೆ ಬಡತನ ರೇಖೆಗಿಂತ ಮೇಲಿನ(ಎಪಿಎಲ್) ಕಾರ್ಡ್‌ಗಳಾಗಿ ಮರುವರ್ಗೀಕರಿಸಲಾಗುವುದು ಎಂದು ಮುನಿಯಪ್ಪ ತಿಳಿಸಿದ್ದಾರೆ.
ಮುನಿಯಪ್ಪ ಪ್ರಕಾರ, ಸರ್ಕಾರಿ ಉದ್ಯೋಗದಲ್ಲಿರುವ ವ್ಯಕ್ತಿಗಳು, ಆದಾಯ ತೆರಿಗೆ ಪಾವತಿಸುವವರು ಅಥವಾ 1.2 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಗಳಿಸುವ ವ್ಯಕ್ತಿಗಳು ಬಿಪಿಎಲ್ ಕಾರ್ಡ್‌ಗಳಿಗೆ ಅರ್ಹರಲ್ಲ. ಈ ಸಂಬಂಧ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ,ರಾಜ್ಯ ಸರ್ಕಾರ ಬಡವರಿಗೆ ಮರಳಿ ಬಿಪಿಎಲ್ ಕಾರ್ಡ್ ನೀಡಬೇಕು.
ಕಾರ್ಡ್ ರದ್ದು ಪ್ರಕ್ರಿಯೆ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಸಂಬಂಧ ಆರ್ ಅಶೋಕ್, ಮಾಜಿ ಉಪಮುಖ್ಯಮಂತ್ರಿ ಸಿ ಎನ್ ಅಶ್ವಥ್ ನಾರಾಯಣ್, ಮಾಜಿ ಸಚಿವ ಕೆ ಗೋಪಾಲಯ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸಿ, ಸಂತ್ರಸ್ತ ಬಿಪಿಎಲ್ ಕುಟುಂಬಗಳನ್ನು ಭೇಟಿ ಮಾಡಿ, ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದರು.