
ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಕರಾವಳಿ ಪ್ರದೇಶವು ಮಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರೆಗೆ ಸುಮಾರು 320 ಕಿ.ಮೀ. ವ್ಯಾಪಿಸಿದೆ. ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು ಈ ಪ್ರದೇಶದಲ್ಲಿವೆ. ಹೊಸ ನೀತಿಯಡಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ವಿಶೇಷ ಪ್ರೋತ್ಸಾಹಕ ಕ್ರಮಗಳು, ಸರಳೀಕೃತ ಅನುಮೋದನಾ ವ್ಯವಸ್ಥೆ ಹಾಗೂ ಹೆಚ್ಚಿನ ಖಾಸಗಿ ಬಂಡವಾಳ ಆಕರ್ಷಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. 
ಪ್ರವಾಸೋದ್ಯಮ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ ಮತ್ತು ಮೂಲಸೌಕರ್ಯ ಸ್ಥಾನಮಾನ ನೀಡುವ ಪ್ರಸ್ತಾವವೂ ನೀತಿಯಲ್ಲಿದೆ. ಆಡಳಿತಾತ್ಮಕ ಅಡೆತಡೆಗಳನ್ನು ಕಡಿಮೆ ಮಾಡಿ ಖಾಸಗಿ ಹೂಡಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. 
ಸಿಂಗಲ್ ವಿಂಡೋ ವ್ಯವಸ್ಥೆ ಮೂಲಗಳ ಪ್ರಕಾರ ಹೂಡಿಕೆದಾರರಿಗೆ ಯೋಜನೆ ರೂಪಿಸುವ ಹಂತದಿಂದ ಅನುಮೋದನೆ ಹಾಗೂ ಅನುಷ್ಠಾನದವರೆಗೆ ನೆರವು ನೀಡಲು ‘ಟೂರಿಸಂ ಇನ್ವೆಸ್ಟ್‌ಮೆಂಟ್ ಫೆಸಿಲಿಟೇಷನ್ ಸೆಲ್’ ಹಾಗೂ ‘ಸಿಂಗಲ್ ವಿಂಡೋ ಸಿಸ್ಟಂ’ ಸ್ಥಾಪಿಸಲಾಗುತ್ತದೆ. ಹಲವು ಇಲಾಖೆಗಳೊಂದಿಗೆ ಸಮನ್ವಯ, ಅರ್ಜಿಗಳ ಅಂತ್ಯದಿಂದ ಅಂತ್ಯದವರೆಗೆ ವಿಲೇವಾರಿ ಹಾಗೂ ಕುಂದುಕೊರತೆಗಳ ಪರಿಹಾರಕ್ಕೆ ಈ ವ್ಯವಸ್ಥೆ ನೆರವಾಗಲಿದೆ ಎಂದು ಇಲಾಖೆ ತಿಳಿಸಿದೆ. ಭೂಮಿ, ತೆರಿಗೆ ವಿಚಾರದಲ್ಲೂ ಹಲವು ಸೌಲಭ್ಯ ಪ್ರವಾಸೋದ್ಯಮ ಯೋಜನೆಗಳಿಗೆ ಹೂಡಿಕೆ ಸುಲಭವಾಗುವಂತೆ ಲ್ಯಾಂಡ್ ಪೂಲಿಂಗ್ ಕಾರ್ಯಕ್ರಮ, ಲ್ಯಾಂಡ್ ಲೀಸ್ ಪಾಲಿಸಿ, ಭೂ ಪರಿವರ್ತನೆ ನಿಯಮಗಳ ಸರಳೀಕರಣ, ಭೂ ಪರಿವರ್ತನೆ ಶುಲ್ಕ ಮರುಪಾವತಿ ಸೇರಿದಂತೆ ಹಲವು ಕ್ರಮಗಳನ್ನು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಆದ್ಯತೆಯ ಪ್ರವಾಸೋದ್ಯಮ ಯೋಜನೆಗಳಿಗೆ ಭೂ ಬಳಕೆ ಬದಲಾವಣೆಯನ್ನು ‘ಡೀಮ್ಡ್’ ರೀತಿಯಲ್ಲಿ ಪರಿಗಣಿಸುವುದು ಹಾಗೂ ಗುರುತಿಸಲಾದ ಟೂರಿಸಂ ಇನ್ವೆಸ್ಟ್‌ಮೆಂಟ್ ಪ್ರಮೋಷನ್ ಏರಿಯಾಗಳಲ್ಲಿ ಆಸ್ತಿ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವವೂ ಇದೆ. ಇದರ ಜೊತೆಗೆ FAR/FSI ನಿಯಮಗಳ ಸಡಿಲಿಕೆ, ಟ್ರಾನ್ಸ್‌ಫರಬಲ್ ಡೆವಲಪ್‌ಮೆಂಟ್ ರೈಟ್ಸ್ , ಸಾರ್ವಜನಿಕ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಸಹಭಾಗಿತ್ವ ಹಾಗೂ ವಿಬಿಲಿಟಿ ಗ್ಯಾಪ್ ಫಂಡಿಂಗ್ ಗೂ ಅವಕಾಶ ಕಲ್ಪಿಸಲಾಗಿದೆ. 
ಅಲ್ಲದೆ ನಿರ್ದಿಷ್ಟ ಪ್ರವಾಸೋದ್ಯಮ ಯೋಜನೆಗಳಿಗೆ ಬಡ್ಡಿ ಸಹಾಯಧನ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆ ಸಬ್ಸಿಡಿ ದೊರೆಯುವ ಸಾಧ್ಯತೆಯಿದ್ದು, ವೈದ್ಯಕೀಯ ಮತ್ತು ಶೈಕ್ಷಣಿಕ ಪ್ರವಾಸೋದ್ಯಮಕ್ಕೂ ನೀತಿಯಡಿ ಬೆಂಬಲ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ
500 ಕೋಟಿ ರೂ ಅನುದಾನ ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ-2026 ಅಡಿ ₹500 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಮತ್ತು ಸಂಸ್ಥೆಗಳ ಅನುದಾನ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ನೆರವು, CSR ನಿಧಿ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಖಾಸಗಿ ಹೂಡಿಕೆಯನ್ನೂ ಸೇರಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. 
ಮಾತ್ರವಲ್ಲದೇ ಸರ್ಕಾರದ ಸ್ವಂತ ವೆಚ್ಚವನ್ನು ಆರಂಭಿಕ ಹೂಡಿಕೆಯಾಗಿ ಬಳಸಿಕೊಂಡು, ಕರಾವಳಿ-ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದ ಖಾಸಗಿ ಬಂಡವಾಳ ಆಕರ್ಷಿಸುವ ಉದ್ದೇಶ ಹೊಂದಲಾಗಿದೆ ಎಂದು ಇಲಾಖೆ ಹೇಳಿದೆ. ಸಚಿವರು ಹೇಳಿದ್ದೇನು? “ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಸಂಪೂರ್ಣ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರ್ಕಾರದ ಹೂಡಿಕೆ ಮಾತ್ರ ಸಾಕಾಗುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಖಾಸಗಿ ಬಂಡವಾಳ, ಪರಿಣತಿ ಮತ್ತು ಹೊಸ ಆಲೋಚನೆಗಳನ್ನು ಆಕರ್ಷಿಸಬೇಕಿದೆ. ಹೂಡಿಕೆದಾರರಿಗೆ ಸ್ಪಷ್ಟ ನೀತಿ ಚೌಕಟ್ಟು, ತ್ವರಿತ ಅನುಮೋದನೆ ಹಾಗೂ ಅನುಕೂಲಕರ ವಾತಾವರಣ ಕಲ್ಪಿಸುವುದು ನಮ್ಮ ಉದ್ದೇಶ” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಹೂಡಿಕೆದಾರರು ವಿವಿಧ ಅನುಮೋದನೆಗಳಿಗಾಗಿ ಪ್ರತ್ಯೇಕವಾಗಿ ಹಲವು ಇಲಾಖೆಗಳ ಕಚೇರಿಗಳಿಗೆ ಅಲೆದಾಡಬೇಕಾದ ಅಗತ್ಯವನ್ನು ಕಡಿಮೆ ಮಾಡುವುದು ನೀತಿಯ ಪ್ರಮುಖ ಉದ್ದೇಶವಾಗಿದೆ ಎಂದರು. 
ಟೂರಿಸಂ ಇನ್ವೆಸ್ಟ್‌ಮೆಂಟ್ ಫೆಸಿಲಿಟೇಷನ್ ಸೆಲ್ ಮತ್ತು ಸಿಂಗಲ್ ವಿಂಡೋ ವ್ಯವಸ್ಥೆಯ ಮೂಲಕ ಯೋಜನೆ ಪ್ರಸ್ತಾವನೆಯಿಂದ ಅನುಮೋದನೆಯವರೆಗೆ ಮಾರ್ಗದರ್ಶನ, ಇಲಾಖೆಗಳ ನಡುವಿನ ಸಮನ್ವಯ ಮತ್ತು ಕುಂದುಕೊರತೆ ಪರಿಹಾರಕ್ಕೆ ಒಂದೇ ವೇದಿಕೆ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು. ನೀತಿಯಡಿ ಘೋಷಿಸಲಾಗಿರುವ ಪ್ರೋತ್ಸಾಹಕ ಕ್ರಮಗಳನ್ನು ಜಾರಿಗೆ ತರಲು ಸ್ಪಷ್ಟ ಹಾಗೂ ಸಮಯಬದ್ಧ ವ್ಯವಸ್ಥೆಯನ್ನೂ ರೂಪಿಸಲಾಗುವುದು ಎಂದು ಮನೋಹರ್ ಹೇಳಿದರು.
Leave a comment