ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದ ಸಂಪರ್ಕ ರಸ್ತೆ ಹಾಗೂ ಸೌಪರ್ಣಿಕಾ ನದಿ ದಂಡೆ ರಕ್ಷಣಾ ಕಾಮಗಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ಮಾನ್ಯ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಕಾಮಗಾರಿಗೆ ಎದುರಾಗಿದ್ದ ಬಹುದಿನಗಳ ಕಾನೂನು ತೊಡಕು ಸಂಪೂರ್ಣ ನಿವಾರಣೆಯಾದಂತಾಗಿದೆ.

ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿರುವ ಈ ಕಾಮಗಾರಿಯು ಪರಿಸರ ಹಾನಿ, ಕಾಂಡ್ಲಾವನ ನಾಶ ಮತ್ತು ಖಾಸಗಿ ಜಮೀನು ಅತಿಕ್ರಮಣಕ್ಕೆ ಕಾರಣವಾಗಿದೆ ಎಂದು ಆಕ್ಷೇಪಿಸಿ ಕುಂದಾಪುರದ ಪ್ಲಾಸಿಡ್ ಕ್ಲಿಂಟನ್ ವಾಸ್ ಎಂಬುವರು 2022ರಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಆಕ್ಷೇಪಗಳನ್ನು ಬಲವಾಗಿ ತಳ್ಳಿಹಾಕಿದ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಅವರು, ಯೋಜನೆಯ ಸಮಗ್ರ ವಾಸ್ತವಾಂಶಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ನ್ಯಾಯಪೀಠದ ಗಮನಕ್ಕೆ ತಂದು ವಾದ ಮಂಡಿಸಿದರು.

ಹೈಕೋರ್ಟ್‌ನಲ್ಲಿ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಅವರ ಪ್ರಮುಖ ವಾದಗಳು:
* ಭೌಗೋಳಿಕ ಸವಾಲು: ಕುಂದಾಪುರ ಮತ್ತು ಬೈಂದೂರು ಕರಾವಳಿ ತೀರದ ಭೌಗೋಳಿಕ ಸ್ವರೂಪ ವಿಭಿನ್ನ ಹಾಗೂ ಸಂಕೀರ್ಣವಾಗಿದೆ. ನದಿ ಮತ್ತು ಸಮುದ್ರದ ಮಧ್ಯೆ ಅನಾದಿ ಕಾಲದಿಂದಲೂ ವಾಸಿಸುತ್ತಿರುವ ಸ್ಥಳೀಯ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ.
* ಸಾರ್ವಜನಿಕ ಹಿತಾಸಕ್ತಿ: ಸ್ಥಳೀಯ ನಾಗರಿಕರಿಗೆ ಹಾಗೂ ಇತಿಹಾಸಿಕ ದೇವಸ್ಥಾನಕ್ಕೆ ಅಗತ್ಯ ಸಂಪರ್ಕ ರಸ್ತೆ ನಿರ್ಮಿಸುವುದು ಮತ್ತು ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
* ಉದ್ದೇಶಪೂರ್ವಕ ಆಕ್ಷೇಪ: ಈ ಯೋಜನೆಯನ್ನು ವಿರೋಧಿಸುತ್ತಿರುವುದು ಸಾರ್ವಜನಿಕ ಕಾಳಜಿಯಿಂದಲ್ಲ; ಬದಲಾಗಿ ವೈಯಕ್ತಿಕ ದ್ವೇಷ ಹಾಗೂ ಹರಮಾರಿ ಧೋರಣೆಯಿಂದ ಕೂಡಿದೆ.

* ತಾಂತ್ರಿಕ ಸಮ್ಮತಿ: ಯೋಜನೆಯಲ್ಲಿ ಯಾವುದೇ ತಾಂತ್ರಿಕ ಲೋಪಗಳಾಗಲೀ, ಶಾಸನಬದ್ಧ ಅನುಮತಿಗಳ ಕೊರತೆಯಾಗಲೀ ಇಲ್ಲದಿರುವಾಗ, ಕೇವಲ ವ್ಯಕ್ತಿಗತ ಆಕ್ಷೇಪಗಳ ಆಧಾರದ ಮೇಲೆ ಇಂತಹ ಬೃಹತ್ ಸಾರ್ವಜನಿಕ ಯೋಜನೆಗೆ ತಡೆ ನೀಡಲಾಗದು.
* ಪ್ರವಾಹ ನಿಯಂತ್ರಣ ಮತ್ತು ಸುರಕ್ಷತೆ: ಸೌಪರ್ಣಿಕಾ ನದಿಯ ಪ್ರವಾಹದಿಂದ ದಂಡೆಯನ್ನು ರಕ್ಷಿಸುವ ತಡೆಗೋಡೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣವು ಸಾರ್ವಜನಿಕರ ಜೀವ-ಮಾಲಿನ ಸುರಕ್ಷತೆಗೆ ಅತ್ಯಗತ್ಯ.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ನದಿ ದಂಡೆಯ ನೈಸರ್ಗಿಕ ಸಂರಕ್ಷಣೆ ಮತ್ತು ಭಕ್ತಾದಿಗಳ ಹಿತದೃಷ್ಟಿಯಿಂದ ಈ ಕಾಮಗಾರಿ ಅನಿವಾರ್ಯ ಎಂಬುದನ್ನು ಪರಿಗಣಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

ಅಂದಿನ ಜನಪ್ರತಿನಿಧಿಗಳು, ಹಿಂದಿನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಶ್ರಮಕ್ಕೆ ಒಲಿದ ಜಯ:
ಈ ಕಾಮಗಾರಿಯ ಆರಂಭಿಕ ಹಂತದಲ್ಲಿ ಮಾಜಿ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದರು. ಜೊತೆಗೆ ದೇವಸ್ಥಾನದ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸತೀಶ್ ನಾಯಕ್ ನಾಡ, ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ್ ಮರವಂತೆ, ಗಣೇಶ್ ಖಾರ್ವಿ, ಶೋಭಾ, ಕೇಶವಾನಂದ ಅಡಿಗ, ರಮೇಶ್ ಪಡುಕೋಣೆ, ಗುರು ಶೆಟ್ಟಿ, ಅನಿತಾ R. K., ಸಂತೋಷ್ ಹಾಗೂ ಸ್ಥಳೀಯ ನಾಯಕರಾದ ರಾಜು ಕುರು ಅವರ ನಿರಂತರ ಪ್ರಯತ್ನವಿತ್ತು.

ಅಲ್ಲದೆ, ಅಂದಿನ ಬೈಂದೂರಿನ ತಹಶೀಲ್ದಾರ್ ಹಾಗೂ ಅವರ ಸಿಬ್ಬಂದಿ ವರ್ಗ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ತೋರಿಸಿದ ವಿಶೇಷ ಮುತುವರ್ಜಿಯ ಫಲವಾಗಿ ಇಂದು ನ್ಯಾಯಾಲಯದಲ್ಲಿ ಸತ್ಯಕ್ಕೆ ಜಯ ಸಿಕ್ಕಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಸ್ಥಳೀಯರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ನ್ಯಾಯಾಲಯದ ಈ ತೀರ್ಪಿಗೆ ಇಡೀ ಭಕ್ತವೃಂದ ಹಾಗೂ ಸ್ಥಳೀಯ ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿ ನ್ಯಾಯವಾದಿ ಪವನ ಚಂದ್ರ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ

Leave a comment