ಉಕ್ರೇನ್ ಮೇಲೆ ಬೃಹತ್ ಪ್ರಮಾಣದ ಕ್ಷಿಪಣಿ ದಾಳಿ ಆರಂಭಿಸಿದ ರಷ್ಯಾ. ಕೊನೆಯೆ ಕಾಣದ ರಷ್ಯಾ-ಉಕ್ರೇನ್ ಯುದ್ಧ, ಮಾನವನ ಆಸೆಗಳಿಗೆ ಹೇಗೆ ಕೊನೆಯಿಲ್ಲವೋ ಹಾಗೆಯೇ ರಷ್ಯಾ-ಉಕ್ರೇನ್ ಯುದ್ಧಕ್ಕೂ ಕೊನೆ ಎಂಬುದಿಲ್ಲ. ಇಡೀ ಜಗತ್ತು ಈ ಸುದೀರ್ಘ ಯುದ್ಧ ಮುಗಿಯಲಿ ಎಂದು ಪ್ರಾರ್ಥಿಸುತ್ತಿದ್ದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತ್ರ ಯುದ್ಧವನ್ನು ಮುಂದುವರೆಸುವ ಹುಮ್ಮಸ್ಸಿನಲ್ಲಿದ್ದಾರೆ.
ಅದರಂತೆ ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲೆ ರಷ್ಯಾ ದೊಡ್ಡ ಪ್ರಮಾಣದ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ರಷ್ಯಾದ ಈ ಭೀಕರ ದಾಳಿಯಿಂದ ಉಕ್ರೇನ್‌ನ ಬಹುದೊಡ್ಡ ಭೂಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಮೂಲಸೌಕರ್ಯವಿಲ್ಲದೇ ಪರದಾಡುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಉಕ್ರೇನ್ ರೈಲು ನಿಲ್ದಾಣದ ಮೇಲೆ ರಷ್ಯಾ ದಾಳಿ ನಡೆಸಿತ್ತು.

“ಶತ್ರು ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲೆ ಮತ್ತೆ ಭಾರಿ ಪ್ರಮಾಣದ ದಾಳಿ ನಡೆಸುತ್ತಿದೆ. ಈ ಕಾರಣದಿಂದಾಗಿ, ಉಕ್ರೇನ್‌ನ ಹಲವಾರು ಪ್ರದೇಶಗಳಲ್ಲಿ ತುರ್ತು ವಿದ್ಯುತ್ ಕಡಿತಗೊಳಿಸಲಾಗಿದೆ” ಎಂದು ಇಂಧನ ಸಚಿವೆ ಸ್ವಿಟ್ಲಾನಾ ಗ್ರಿಂಚುಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಯಾವ ನಿರ್ದಿಷ್ಟ ಸ್ಥಳಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿದೆ ಎಂಬುದನ್ನು ಗ್ರಿಂಚುಕ್ ಸ್ಪಷ್ಟಪಡಿಸಿಲ್ಲ.
“ಇಂಧನ ವ್ಯವಸ್ಥೆಯಲ್ಲಿನ ಪರಿಸ್ಥಿತಿ ಸ್ಥಿರವಾದ ನಂತರ ತುರ್ತು ವಿದ್ಯುತ್ ಕಡಿತವನ್ನು ರದ್ದುಗೊಳಿಸಲಾಗುತ್ತದೆ” ಎಂದು ತಿಳಿಸಿರುವ ಸ್ವಿಟ್ಲಾನಾ ಗ್ರಿಂಚುಕ್, ಶತ್ರುಗಳ ಯೋಜನೆಗಳ ಹೊರತಾಗಿಯೂ, ಈ ಚಳಿಗಾಲದಲ್ಲಿ ಉಕ್ರೇನ್ ಅಗತ್ಯ ಪ್ರಮಾಣದ ಶಕ್ತಿ ಸಂಪನ್ಮೂಲಗಳನ್ನು ಉತ್ಪಾದಿಸಲಿದೆ ಎಂದು ಭರವಸೆ ನೀಡಿದ್ದಾರೆ. ರಾಷ್ಟ್ರವ್ಯಾಪಿ ವಾಯುದಾಳಿ ಎಚ್ಚರಿಕೆಗಳನ್ನು ಕೊಡಲಾಗಿದ್ದು, ರಾತ್ರಿಯಿಡೀ ಉಕ್ರೇನ್‌ನ ಹಲವು ನಗರಗಳಲ್ಲಿ ಸೈರನ್‌ಗಳು ಮೊಳಗಿವೆ.

ಈಶಾನ್ಯ ಖಾರ್ಕಿವ್ ಮತ್ತು ದಕ್ಷಿಣ ಒಡೆಸಾದಲ್ಲಿ ಅಧಿಕಾರಿಗಳು ಇಂಧನ ಸೌಲಭ್ಯಗಳ ಮೇಲೆ ಡ್ರೋನ್ ದಾಳಿಯನ್ನು ದೃಢಪಡಿಸಿದ್ದಾರೆ. ಡ್ನಿಪ್ರೊದಲ್ಲಿ ಡ್ರೋನ್ ದಾಳಿಯು ಒಂಬತ್ತು ಅಂತಸ್ತಿನ ಕಟ್ಟಡವನ್ನು ಧ್ವಂಸಗೊಳಿಸಿದ್ದು, ಓರ್ವ ಮಹಿಳೆಯನ್ನು ಬಲಿ ಪಡೆದಿದೆ. ರಷ್ಯಾದ ದಾಳಿಯಲ್ಲಿ ಮಗು ಸೇರಿದಂತೆ ಒಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತುರ್ತು ಸೇವೆಗಳು ವರದಿ ಮಾಡಿವೆ. ಸುಮಾರು ನಾಲ್ಕು ವರ್ಷಗಳ ಕಾರ್ಯಾಚರಣೆಯ ಉದ್ದಕ್ಕೂ, ರಷ್ಯಾ ಉಕ್ರೇನ್‌ನ ವಿದ್ಯುತ್ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಹಲವು ಬಾರಿ ದಾಳಿ ನಡೆಸಿದೆ.
ಉಕ್ರೇನ್ ತನ್ನ ನಾಲ್ಕನೇ ಯುದ್ಧಕಾಲದ ಚಳಿಗಾಲವನ್ನು ಎದುರಿಸುತ್ತಿರುವಾಗ ಇಂಧನ ಸೌಲಭ್ಯಗಳ ಮೇಲಿನ ನಿರಂತರ ದಾಳಿಗಳು, ವಿದ್ಯುತ್ ಲಭ್ಯತೆಯ ಬಗ್ಗೆ ಗಮನಾರ್ಹ ಕಳವಳಗಳನ್ನು ಹುಟ್ಟುಹಾಕಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿತ್ತು. ಉಕ್ರೇನ್ ಮೇಲೆ ಮತ್ತೆ ಮುಗಿಬಿದ್ದ ರಷ್ಯಾ! 210 ಕ್ಷಿಪಣಿ, ಡ್ರೋನ್ ಮೂಲಕ ದಾಳಿ, ಪವರ್ ಗ್ರಿಡ್‌ಗಳೇ ಟಾರ್ಗೆಟ್ ಕೈವ್ ಸ್ಕೂಲ್ ಆಫ್ ಎಕನಾಮಿಕ್ಸ್ ವರದಿಯ ಪ್ರಕಾರ, ರಷ್ಯಾದ ನಿರಂತರ ದಾಳಿಗಳು ಉಕ್ರೇನ್‌ನ ನೈಸರ್ಗಿಕ ಅನಿಲ ಉತ್ಪಾದನೆಯ ಅರ್ಧದಷ್ಟು ಭಾಗವನ್ನು ನಿಷ್ಕ್ರಿಯಗೊಳಿಸಿವೆ.
ಪ್ರಮುಖ ಇಂಧನ ತಜ್ಞ ಓಲೆಕ್ಸಾಂಡರ್ ಖಾರ್ಚೆಂಕೊ ಮಾಧ್ಯಮ ಅಧಿವೇಶನದಲ್ಲಿ ಮಾತನಾಡುತ್ತಾ, ” ಕೈವ್‌ನ ಎರಡು ವಿದ್ಯುತ್ ಸ್ಥಾವರಗಳು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಮೂರು ದಿನಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸದಿದ್ದರೆ ತಾಂತ್ರಿಕ ವಿಪತ್ತು ಎದುರಿಸಬಹುದು” ಎಂದು ಎಚ್ಚರಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾದ ಪಡೆಗಳು ಉಕ್ರೇನ್‌ನ ಇಂಧನ ಸೌಲಭ್ಯಗಳ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸಿವೆ. ಇದು ದೇಶಕ್ಕೆ ಅಗತ್ಯವಾದ ತಾಪನ ಇಂಧನವನ್ನು ಒದಗಿಸುವ ನೈಸರ್ಗಿಕ ಅನಿಲ ಸ್ಥಾಪನೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದೆ. ಕಳೆದ ಆಗಸ್ಟ್‌ನಲ್ಲಿ ರಷ್ಯಾದ ನ್ಯೂಕ್ಲಿಯರ್ ನೆಲೆ ಮೇಲೆ ಉಕ್ರೇನ್ ದಾಳಿ ಮಾಡಿತ್ತು.”

Leave a comment