“ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದಾ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುತ್ತವೆ. ಆಡಳಿತ ಪಕ್ಷದ ನಾಯಕರು ವಿಪಕ್ಷದ ನಾಯಕರು ಮುಖಾಮುಖಿಯಾಗುವುದು ಸಾಮಾನ್ಯ.
ಇನ್ನು ಕರ್ನಾಟಕ ವಿಧಾನಸಭೆ ಮುಂಗಾರು ಅಧಿವೇಶನ ಆರಂಭವಾಗಿದ್ದು ಆಡಳಿತ ಹಾಗೂ ವಿಪಕ್ಷ ಶಾಸಕರು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.
ಈ ಮಧ್ಯೆ ಇಂದು ಮಧ್ಯಾಹ್ನ ವಿಧಾನಸಭೆಯ ಮುಗಸಾಲೆಯಲ್ಲಿ ಹೋಗುತ್ತಿದ್ದ ಹಿಂದುತ್ವವಾದಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಿಎಂ ಸಿದ್ದರಾಮಯ್ಯ ಖುದ್ದು ಕರೆದು ಕುಶಲೋಪರಿ ವಿಚಾರಿಸಿದರು.
ಇನ್ನು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಯತ್ನಾಳ್ ಅವರು ಕಾಂಗ್ರೆಸ್ ಸೇರುತ್ತಾರಾ ಎಂಬ ಊಹಾಪೋಹಗಳು ಎದ್ದಿವೆ. ಪಕ್ಷದ ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ ಕಾರಣ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿತ್ತು.ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಗೊಳ್ಳುತ್ತಿರುವುದು ಇದೇ ಮೊದಲೆನಲ್ಲ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಇತರ ಪ್ರಮುಖ ನಾಯಕರ ವಿರುದ್ಧ ದಂಗೆ ಎದ್ದಿದ್ದಕ್ಕಾಗಿ ಅವರನ್ನು ಈ ಹಿಂದೆ 2 ಬಾರಿ ಹೊರಹಾಕಲಾಯಿತು. 2009 ರಲ್ಲಿ ಯಡಿಯೂರಪ್ಪ ಮತ್ತು ಪ್ರಸ್ತುತ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಯತ್ನಾಳ್ ಅವರನ್ನು ಉಚ್ಛಾಟಿಸಲಾಗಿತ್ತು.
ಮತ್ತೆ ಅವರು ಪಕ್ಷಕ್ಕೆ ಸೇರಿದ್ದರು. ಇನ್ನು 2016ರಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಜಿಎಸ್ ನ್ಯಾಮಗೌಡ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರನ್ನು ಮತ್ತೊಮ್ಮೆ ಹೊರಹಾಕಲಾಯಿತು.
ಕುತೂಹಲಕಾರಿಯಾಗಿ, ಅವರು ಪಕ್ಷದ ವಿರುದ್ಧ ಹೋರಾಡಿದರೂ ಚುನಾವಣೆಯಲ್ಲಿ ಗೆದ್ದರು. ಎರಡನೇ ಬಾರಿಗೆ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.
Leave a comment