“ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು ಹೂತಿದ್ದ 13 ಸ್ಥಳಗಳನ್ನು ಅಧಿಕಾರಿಗಳಿಗೆ ತೋರಿಸಿದ್ದಾನೆಂದು ತಿಳಿದುಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ತನಿಖೆಯನ್ನು ಚುರುಕುಗೊಳಿಸಿದ್ದು, ಶವಗಳನ್ನು ಹೂಳಲಾಗಿದೆ ಎಂಬ ಸಾಕ್ಷಿ-ದೂರುದಾರನ ಹೇಳಿಕೆ ಅನ್ವಯ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಸೋಮವಾರ ಪರಿಶೀಲನೆ ನಡೆಸಿತು.
ಸಾಕ್ಷಿ-ದೂರುದಾರರು ಸೋಮವಾರ ಬೆಳಿಗ್ಗೆ 11.30 ರ ಸುಮಾರಿಗೆ ಕಾನೂನು ಸಲಹೆಗಾರರೊಂದಿಗೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಮುಸುಕುಧಾರಿ ವ್ಯಕ್ತಿಯಾಗಿ ಆಗಮಿಸಿದರು.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು, ಒಂದು ಗಂಟೆ ವಿಚಾರಣೆ ನಡೆಸಿ ಕೆಲವು ದಾಖಲಾತಿ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ, ಸಾಕ್ಷಿ-ದೂರುದಾರ ವ್ಯಕ್ತಿಯನ್ನು ಮೊದಲಿಗೆ ನೇತ್ರಾವತಿ ಸ್ನಾನಘಟ್ಟ ಪ್ರದೇಶಕ್ಕೆ ಕರೆದೊಯ್ದರು,
ಅಲ್ಲಿ ವ್ಯಕ್ತಿ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳವನ್ನು ತೋರಿಸಿದರು. ನಂತರ ಆತ ಎಸ್‌ಐಟಿ ಅಧಿಕಾರಿಗಳನ್ನು ನೇತ್ರಾವತಿ ನದಿಯ ಪಕ್ಕದಲ್ಲಿ ಪೊದೆಗಳು ಮತ್ತು ಮರಗಳಿಂದ ಆವೃತವಾದ ಪ್ರದೇಶಕ್ಕೆ ಕರೆದೊಯ್ದನು.
ಬಳಿಕ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಭೂ ದಾಖಲೆಗಳ ವಿಭಾಗದ ಸಿಬ್ಬಂದಿ ಸುತ್ತುವರೆದು ಪರಿಶೀಲನೆ ನಡೆಸಿ, ಸಾಕ್ಷಿ-ದೂರುದಾರ ತೋರಿಸಿದ ಒಂದೊಂದು ಜಾಗದ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡು, ಅಲ್ಲಿ ಕೆಂಪು ರಿಬ್ಬನ್ ಕಟ್ಟಿದರು
. ಆತ ತೋರಿಸುತ್ತಾ ಹೋದ ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಗುರುತು ಮಾಡಿದರು. ಬಳಿಕ ಪ್ರತಿ ಸ್ಥಳದಲ್ಲಿ ಇಬ್ಬರು ಎಎನ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಿದರು.
ಜಾಗವನ್ನು ಗುರುತಿಸುವ ಪ್ರಕ್ರಿಯೆಯನ್ನು ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಯಿತು. ದೂರುದಾರರು ಗುರುತಿಸಿರುವ ಸಮಾಧಿ ಸ್ಥಳಗಳನ್ನು ಸ್ಥಳ ಮಹಜರು ಮಾಡುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಿದ್ದೇವೆ.
ಮಂಗಳವಾರವೂ ಸ್ಥಳ ಪರಿಶೀಲನೆ ಮುಂದುವರಿಯುತ್ತದೆ ಎಂದು ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯುವ ಮೊದಲು, ಸಾಕ್ಷ್ಯಾಧಾರಗಳನ್ನು ಹಾಳು ಮಾಡುವುದನ್ನು ತಡೆಯಲು ದೂರುದಾರರು ತೋರಿಸಿರುವ ಸ್ಥಳಗಳನ್ನು ಸುರಕ್ಷಿತವಾಗಿರಿಸಲು ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ದೂರುದಾರರ ವ್ಯಕ್ತಿ ಶನಿವಾರ ಮತ್ತು ಭಾನುವಾರ ಎಸ್‌ಐಟಿ ಅಧಿಕಾರಿಗಳಾದ ಡಿಐಜಿ ಎಂಎನ್ ಅನುಚೇತ್ ಮತ್ತು ದಯಾಮಾ ಅವರ ಮುಂದೆ ಹಾಜರಾಗಿ, ಹಲವುಗಂಟೆಗಳ ಕಾಲ ವಿವರವಾದ ಹೇಳಿಕೆಗಳನ್ನು ದಾಖಲಿಸಿದ್ದರು. ಭಾನುವಾರ ನಡೆದ ವಿಚಾರಣೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಕೂಡ ಹಾಜರಾಗಿದ್ದರು
. ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವಾರದ ನಂತರ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರಾಗಿ, ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
Leave a comment