ಚಿನ್ನ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಅವರಿಗೆ ಸೇರಿದ ರೂ. 34.12 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
2002ರ ಅಕ್ರಮ ಹಣ ವರ್ಗಾವಣೆ ತಡೆ ಪಿಎಂಲ್ಎ ಕಾಯ್ದೆಯಡಿ ಕೇಸ್ ಮಾಡಿ ತನಿಖೆ ನಡೆಸಿದ್ದ ಇಡಿ, ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಆಸ್ತಿಗಳನ್ನು ಜಪ್ತಿ ಮಾಡಿದೆ.
ಡಿಆರ್ ಐ ದೂರಿನ ಆಧಾರದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿದ ನಂತರ ಇಡಿ ತನಿಖೆ ಪ್ರಾರಂಭಿಸಿತು. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18.92 ಕೋಟಿ ಮೌಲ್ಯದ 21.28 ಕೆಜಿ ಚಿನ್ನ ಕಳ್ಳಸಾಗಣೆಯೊಂದಿಗೆ ಇಬ್ಬರು ವಿದೇಶಿ ಪ್ರಜೆಗಳನ್ನು ಡಿಆರ್‌ಐ ತಡೆದ ನಂತರ ಪ್ರಕರಣ ಬೆಳಕಿಗೆ ಬಂದಿತು.
ರನ್ಯಾ ರಾವ್ ಅವರನ್ನು ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿಗೆ ಹಿಂದಿರುಗುವ ಸಂದರ್ಭ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
5 ಡಿಆರ್‌ಐ ಅಧಿಕಾರಿಗಳು ರನ್ಯಾರಿಂದ 14.2 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ತದನಂತರ ಆಕೆಯ ನಿವಾಸದಲ್ಲಿ ಶೋಧ ನಡೆಸಿದಾಗ ಲೆಕ್ಕಕ್ಕೆ ಸಿಗದ 2.67 ಕೋಟಿ ರೂಪಾಯಿ ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ತನಿಖೆ ವೇಳೆ ತನ್ನ ಸಹಚರ ತರುಣ್ ಕೊಂಡೂರು ರಾಜು ಮತ್ತು ಇತರರೊಂದಿಗೆ ಶಾಮೀಲಾಗಿ ದುಬೈ, ಉಗಾಂಡಾ ಮತ್ತು ಇತರ ಸ್ಥಳಗಳಿಗೆ ರನ್ಯಾರಾವ್ ಚಿನ್ನ ಕಳ್ಳಸಾಗಣೆ ಮಾಡಿರುವುದು ತಿಳಿದುಬಂದಿತ್ತು.
ಇಲ್ಲಿಯವರೆಗೆ ಇಡಿ ಒಟ್ಟು ರೂ. 55.62 ಕೋಟಿಯಷ್ಟು ಅಕ್ರಮ ಆದಾಯವನ್ನು ತಿಳಿಸಿದೆ ರನ್ಯಾ ರಾವ್ ಅವರಿಗೆ ಸೇರಿದ ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಒಂದು ಮನೆ, ಅರ್ಕಾವತಿ ಲೇಔಟ್‌ನಲ್ಲಿರುವ ಒಂದು ಪ್ಲಾಟ್, ತುಮಕೂರಿನ ಕೈಗಾರಿಕಾ ಭೂಮಿ ಮತ್ತು ಆನೇಕಲ್‌ನಲ್ಲಿ ಕೃಷಿ ಭೂಮಿಯನ್ನು ಪಿಎಂಎಲ್ಎ ನ ಸೆಕ್ಷನ್ 5(1) ಅಡಿಯಲ್ಲಿ ಜಪ್ತಿ ಮಾಡಿದೆ
. ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಮತ್ತು ಸಿಂಡಿಕೇಟ್‌ನಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಇಡಿ ತಿಳಿಸಿದೆ.