“ರೈತರ ಜೀವನಾಡಿಯಾದ ಕೃಷ್ಣರಾಜಸಾಗರ ಜಲಾಶಯವು 93 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ
. ಕೆಆರ್‌ಎಸ್ ಅಣೆಕಟ್ಟೆ ಜೂನ್ ತಿಂಗಳಲ್ಲೇ ಭರ್ತಿಯಾಗಿರುವ ಸಂಭ್ರಮದ ಅಂಗವಾಗಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿಗೆ ಬಾಗಿನ ಅರ್ಪಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಕೆಆರ್ಎಸ್ ಡ್ಯಾಂ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸಲಾಗುತ್ತದೆ. ಆದರೆ ಈ ವರ್ಷ ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದ್ದು,
ಸಿಎಂ ಸಿದ್ದರಾಮಯ್ಯ ಅವರು ಜೂನ್ ತಿಂಗಳಿನಲ್ಲಿಯೇ ಬಾಗಿನ ಅರ್ಪಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ನಿರ್ಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ 2013, 2014, 2024 ಈ ಮೂರು ವರ್ಷ ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದ್ದರು.
ಇಂದು ಕೆಆರ್ ಎಸ್ ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು, ಕೆಆರ್‌ಎಸ್ ನಿರ್ಮಾತೃಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಮುಖ್ಯಮಂತ್ರಿಗಳಿಗೆ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ ಎಚ್.ಸಿ ಮಹದೇವಪ್ಪ ಸೇರಿದಂತೆ ಹಳೇ ಮೈಸೂರು ಭಾಗದ ಸಚಿವರು, ಶಾಸಕರು ಸಾಥ್ ನೀಡಿದರು. ವೈದಿಕ ಬಾನು ಪ್ರಕಾಶ್ ಶರ್ಮಾರಿಂದ ಪೂಜಾ ಕಾರ್ಯ ನೆರವೇರಿತು. ಜಲಾಶಯಕ್ಕೆ ಕ್ಷೀರಾಭಿಷೇಕ ಪುಷ್ಪಾರ್ಚನೆ ಮಾಡಲಾಯಿತು.
ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ, ಜಲಾಶಯ ಜೂನ್‌ನಲ್ಲೇ ಭರ್ತಿಯಾಗಿದೆ. ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣವಾದ 1931ನೇ ಸಾಲಿನಿಂದ ಇಲ್ಲಿಯವರೆಗೆ ಅಂದರೆ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗುತ್ತಿರುವುದು ರೈತರ ಸಂತಸ ಹೆಚ್ಚಿಸಿದೆ.