ಹೌದು.. ತೆಲಂಗಾಣದ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು, ಅವರ ರಾಜಿನಾಮೆ ವಿಚಾರ ತೆಲಂಗಾಣದಲ್ಲಿ ರಾಜಕೀಯವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಪ್ರಚೋದನಾತ್ಮಕ ಭಾಷಣ ಮತ್ತು ಕೋಮುವಾದಿ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಾಗುತ್ತಿದ್ದ ತೆಲಂಗಾಣದ ವಿವಾದಾತ್ಮಕ ನಾಯಕ ಟಿ ರಾಜಾ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಅವರಿಗೆ ಟಿ ರಾಜಾ ಸಿಂಗ್ ಪತ್ರ ಬರೆದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ತೆಲಂಗಾಣದ ಪಕ್ಷದ ಕಚೇರಿಗೆ ಆಗಮಿಸಿ ಸಾಕಷ್ಟು ಸಮಯ ನಾಯಕರೊಂದಿಗೆ ಚರ್ಚಿಸಿ ಬಳಿಕ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯಾಧ್ಯಕ್ಷರ ಆಯ್ಕೆ ವಿವಾದ ಇನ್ನು ಶಾಸಕ ರಾಜಾ ಸಿಂಗ್ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಎನ್ ರಾಮಚಂದರ್ ರಾವ್ ಅವರನ್ನು ಮುಂದಿನ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ ಎಂದು ಹೇಳಲಾಗಿದೆ.
ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ. ಆದರೆ ರಾಮಚಂದರ್ ರಾವ್ ಅವರ ಆಯ್ಕೆಗೆ ರಾಜಾ ಸಿಂಗ್ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಪಕ್ಷದ ವಿರುದ್ಧ ಮುನಿಸಿಕೊಂಡು ಈ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ರಾಜಾ ಸಿಂಗ್ ಹೇಳಿದ್ದೇನು? ಇನ್ನು ರಾಜಿನಾಮೆ ಬಳಿಕ ಮಾತನಾಡಿದ ರಾಜಾ ಸಿಂಗ್, ‘ರಾಮಚಂದ್ರ ರಾವ್ ಅವರಿಗೆ ಪಕ್ಷದ ಅಧಿಕಾರ ಹಸ್ತಾಂತರದಿಂದ ನನಗೆ ತೀವ್ರ ಅಸಮಾಧಾನವಿದೆ.
ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಲು ಬಯಸಿದ್ದೆ. ಆದರೆ, ನನ್ನ ಬೆಂಬಲಿಗರಿಗೆ ಬೆದರಿಕೆ ಹಾಕಲಾಯಿತು. ನಾನು ನಾಮಪತ್ರ ಸಲ್ಲಿಸಲು ಬಂದಾಗ.. ನನಗೆ ಅದನ್ನು ಸಲ್ಲಿಸಲು ಅವಕಾಶ ನೀಡಲಿಲ್ಲ.
ಅವರು ತಮಗೆ ಬೇಕಾದ ಜನರಿಗೆ ಹುದ್ದೆಯನ್ನು ನೀಡುತ್ತಿದ್ದಾರೆ. ಅದಕ್ಕಾಗಿಯೇ ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ರಾಜ್ಯಾಧ್ಯಕ್ಷರಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಲು ಬಂದಿದ್ದೇನೆ.
ನನ್ನನ್ನು ಬೆಂಬಲಿಸಿ ಮೂವರು ಪರಿಷತ್ ಸದಸ್ಯರು ಸಹ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾವು ಸಾಕಷ್ಟು ಹೋರಾಡಿದ್ದೇವೆ.
ಆದರೆ ಹೆಚ್ಚಿನ ಜನರು ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಬಯಸುತ್ತಾರೆ. ನಾನು ಬಿಜೆಪಿಗಾಗಿ ಎಲ್ಲವನ್ನೂ ನೀಡಿದ್ದೇನೆ. ನಾನು ಮತ್ತು ನನ್ನ ಕುಟುಂಬ ಭಯೋತ್ಪಾದಕರ ಗುರಿಯಾಗಿದ್ದೇವೆ. ಪಕ್ಷಕ್ಕಾಗಿ ಇಷ್ಟೊಂದು ಕೆಲಸ ಮಾಡಿದರೂ ಏನು ಪ್ರಯೋಜನ? ನಿಮಗೂ ಶಿಕ್ಷೆ.. ನಿಮ್ಮ ಪಕ್ಷಕ್ಕೂ ಶಿಕ್ಷೆ.
ಈ ರಾಜೀನಾಮೆ ಲಕ್ಷಾಂತರ ಕಾರ್ಯಕರ್ತರ ನೋವನ್ನು ಪ್ರತಿಬಿಂಬಿಸುತ್ತದೆ. ನಾನು ಬಿಜೆಪಿಗೆ ರಾಜೀನಾಮೆ ನೀಡಿದರೂ ಸಹ.. ನಾನು ಹಿಂದುತ್ವಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ರಾಜಾ ಸಿಂಗ್ ಘೋಷಿಸಿದರು
ಯಾರು ಈ ರಾಮಚಂದ್ರ ರಾವ್? ಹೈಕೋರ್ಟ್ ವಕೀಲರು ಮತ್ತು ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ರಾಮಚಂದ್ರ ರಾವ್ ಅವರು ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಜನತಾ ಯುವ ಮೋರ್ಚಾ ಮತ್ತು ಬಿಜೆಪಿಯ ಕಾನೂನು ಘಟಕದಲ್ಲಿ ಕೆಲಸ ಮಾಡಿದ್ದಾರೆ.
ಅವರು ಈ ಹಿಂದೆ ಪಕ್ಷದ ಹೈದರಾಬಾದ್ ಘಟಕದ ನೇತೃತ್ವ ವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ನಾಯಕತ್ವವು ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗಿದೆ.
ಅಲ್ಲದೆ ರಾಜ್ಯಾಧ್ಯಕ್ಷ ಹುದ್ದೆ ವಿಚಾರವಾಗಿ ಪಕ್ಷದ ಬೇರಾವುದೇ ನಾಯಕರೂ ಸ್ಪರ್ಧೆಗಳಿಯುವಂತಿಲ್ಲ ಎಂದು ಹೈಕಮಾಂಡ್ ಸೂಚಿಸಿದ್ದು, ನಾಳೆ ರಾಮಚಂದ್ರರಾವ್ ಸರ್ವಾನುಮತದಿಂದ ಆಯ್ಕೆಯಾಗಬಹುದು ಎಂದು ಹೇಳಲಾಗಿದೆ.
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಪಕ್ಷದಿಂದ ಹೊರಬಂದ ಕಟ್ಟರ ಹಿಂದುತ್ವವಾದಿ ರಾಜಾ ಸಿಂಗ್
ಹೈದರಾಬಾದ್: ತೆಲಂಗಾಣದ ಬಿಜೆಪಿ ಪಕ್ಷದ ಫೈರ್ ಬ್ರಾಂಡ್ ಹಾಗೂ ಖಟ್ಟರ್ ಹಿಂದುತ್ವವಾದಿ ಶಾಸಕ ರಾಜಾ ಸಿಂಗ್ ಪಕ್ಷಕ್ಕೆ ಗುಡ್ ಬೈ ಹೇಳಿ ಅಚ್ಚರಿ ಮೂಡಿಸಿದ್ದಾರೆ.