“ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ವನ್ನು ತಲುಪಿದ ಮೊದಲ ಭಾರತೀಯ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸಿದ್ದಾರೆ.
ಭಾರತ “ನಕ್ಷೆಯಲ್ಲಿ ನೋಡುವುದಕ್ಕಿಂತ ಬಾಹ್ಯಾಕಾಶದಿಂದ ನೋಡಿದಾಗ ಇನ್ನಷ್ಟು ಭವ್ಯ ಮತ್ತು ದೊಡ್ಡದಾಗಿ ಕಾಣುತ್ತದೆ” ಎಂದು ಶುಭಾಂಶು ಶುಕ್ಲಾ ಅವರು ಪ್ರಧಾನಿ ಮೋದಿ ತಿಳಿಸಿದ್ದಾರೆ
. ಕಳೆದ ಜೂನ್ 25ರಂದು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಇತರ ಮೂವರು ಗಗನಯಾತ್ರಿಗಳ ಜೊತೆ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿದ್ದರು.
ಈ ಮೂಲಕ 40 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಗೌರವಕ್ಕೆ ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ.
ವಿಡಿಯೋ ಸಂವಾದದಲ್ಲಿ, ಪ್ರಧಾನಿ ಮೋದಿ ಅವರು, ಶುಕ್ಲಾ ಅವರ ಸಾಧನೆಯನ್ನು ಶ್ಲಾಘಿಸಿದರು, “ನೀವು ಮಾತೃಭೂಮಿಯಿಂದ ದೂರದಲ್ಲಿದ್ದರೂ, ನೀವು ಎಲ್ಲಾ ಭಾರತೀಯರ ಹೃದಯಗಳಿಗೆ ಹತ್ತಿರವಾಗಿದ್ದೀರಿ” ಎಂದು ಹೇಳಿದರು. “
ಆಪ್ಕೆ ನಾಮ್ ಮೇ ಭಿ ಶುಭ ಹೈ ಔರ್ ಆಪ್ಕಿ ಯಾತ್ರ ನಯೇ ಯುಗ್ ಕಾ ಶುಭರಂಭ್ ಭಿ ಹೈ(ನಿಮ್ಮ ಹೆಸರಿನ ಅರ್ಥವೇ ಶುಭ ಮತ್ತು ನಿಮ್ಮ ಪ್ರಯಾಣವು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ)” ಎಂದು ಹೇಳಿದರು.
1984 ರಲ್ಲಿ ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಹಾರಿದ ರಾಕೇಶ್ ಶರ್ಮಾ ಅವರ ನಂತರ 41 ವರ್ಷಗಳಲ್ಲಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದರು.
“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಹನ ನಡೆಸಿದರು” ಎಂದು ಪ್ರಧಾನಿ ಕಚೇರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶುಭಾಂಶು ಅವರ ಜೊತೆಗಿನ ಸಂವಾದದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಆಕ್ಸಿಯಮ್ -4 ಮಿಷನ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಗುರುವಾರ ಡಾಕಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಬಾಹ್ಯಾಕಾಶ ನಿಲ್ದಾಣದಲ್ಲಿ 2 ವಾರಗಳ ಕಾಲ ವಾಸವಿದ್ದು, ಅಧ್ಯಯನ ನಡೆಸಲಿದ್ದಾರೆ.
ಅವರ ವಾಸ್ತವ್ಯದ ಸಮಯದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ವೈಜ್ಞಾನಿಕ ಪ್ರಯೋಗಗಳು, ತಂತ್ರಜ್ಞಾನ ಪ್ರದರ್ಶನಗಳು ಮತ್ತು ಶಿಕ್ಷಣ ಸಂಪರ್ಕ ಚಟುವಟಿಕೆಗಳನ್ನು ನಡೆಸುತ್ತಾರೆ