ದೂರದ ಮುಂಬಯಿ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿ ಉಡುಪಿ ಜಿಲ್ಲೆಯ ಕಾಪು ಸಮೀಪ ಪತ್ತೆಯಾಗಿದ್ದ ಸಂದರ್ಭದಲ್ಲಿ ರಕ್ಷಣೆ ಹಾಗೂ ಚಿಕಿತ್ಸೆ ನೀಡಿ ಮರಳಿ ಕುಟುಂಬದೊಂದಿಗೆ ಸೇರಿಸಿದ ನಿಸ್ವಾರ್ಥ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ
ರಕ್ಷಿಸಲ್ಪಟ್ಟ ಮಾನಸಿಕ ಅಸ್ವಸ್ಥ ಯೂಸುಫ್ ಕುಟುಂಬಕ್ಕೆ ಹಸ್ತಾಂತರ: ಸಂತೋಷಗೊಂಡ ಕುಟುಂಬಸ್ಥರಿಂದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಆಶ್ರಯ ನೀಡಿದ್ದ ಸ್ವರ್ಗ ಆಶ್ರಮ ಡಾಕ್ಟರ ಹೋಂ ಫೌಂಡೇಶನ್ ಗೆ ಕೃತಜ್ಞತೆ ಸಲ್ಲಿಕೆ
ಉಡುಪಿ ಜೂ.28: ಕಳೆದ ಒಂದೂವರೆ ತಿಂಗಳ ಹಿಂದೆ ಕಾಪು ಠಾಣಾ ವ್ಯಾಪ್ತಿಯಲ್ಲಿ ವಿಶು ಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಮನೋರೋಗಿ ಯುವಕ ಯೂಸುಫ್ ನ ಕುಟುಂಬ ಪತ್ತೆಯಾಗಿದ್ದು ತಂದೆಯ ವಶಕ್ಕೆ ನೀಡಲಾಯಿತು.
ಯುವಕ ಯೂಸುಫ್ ತಡರಾತ್ರಿ ಸಾರ್ವಜನಿಕರ ಮನೆಗಳಿಗೆ ಹೋಗಿದ್ದು ಸಂಶಯಗೊಂಡ ಸಾರ್ವಜನಿಕರು ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಿದ್ದರು. ಈ ಸಮಯ ಜಯಶ್ರೀ ಉದ್ಯಾವರ ಅವರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ತಡರಾತ್ರಿ ಸ್ಥಳಕ್ಕೆ ಧಾವಿಸಿ ಯುವಕನನ್ನು ಪರಿಶೀಲಿಸಿದಾಗ ಮಾನಸಿಕ ಅಸ್ವಸ್ಥ ಎಂಬುದು ಸಾಬೀತಾಗಿದ್ದು ಕೂಡಲೇ ಯುವಕನನ್ನು ಸಂತೈಸಿ ಔಷಧಿ ಹಾಗೂ ಸಲಹಲು ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದರು.
ಸ್ವರ್ಗ ಆಶ್ರಮದಲ್ಲಿ ಯುವಕನು ಬಹಳಷ್ಟು ಸುಧಾರಣೆಗೊಂಡು ಸಜಜ ಸ್ಥಿತಿಗೆ ಬರುತ್ತಿದ್ದನು. ವಿಶು ಶೆಟ್ಟಿ ಯುವಕನ ಭಾವಚಿತ್ರ ಹಾಗೂ ವಿವರಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದರು. ಸಂಬಂಧಿಕರ ಪತ್ತೆಗೆ ಪ್ರಯತ್ನಿಸಿದ್ದರು.
ಪರಿಚಯಸ್ಥರೊಬ್ಬರ ಸಹಾಯದಿಂದ ಈ ವಿಷಯ ಮುಂಬೈ ಮೂಲದ ಯೂಸುಫ್ ನ ಮನೆಯವರಿಗೆ ಮಾಹಿತಿ ಲಭಿಸಿ ವಿಶು ಶೆಟ್ಟಿಯನ್ನು ಸಂಪರ್ಕಿಸಲು ಯೂಸುಫ್ ನ ತಂದೆ ಸಲೀಂ ಉಡುಪಿಗೆ ಬಂದಿದ್ದಾರೆ. ಸ್ವರ್ಗ ಆಶ್ರಮದ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಸಿಬ್ಬಂದಿ ಹಾಗೂ ವಿಶು ಶೆಟ್ಟಿ ಯೂಸಫ್ ನನ್ನು ತಂದೆಗೆ ಹಸ್ತಾಂತರಿಸಿ ಕಳುಹಿಸಿದ್ದಾರೆ.
ಇದೀಗ ತನ್ನ ಊರಾದ ಮುಂಬೈಗೆ ಹೊರಟಿದ್ದು ರಕ್ಷಿಸಿದ ವಿಶು ಶೆಟ್ಟಿ ಹಾಗೂ ಚಿಕಿತ್ಸೆ ನೀಡಿ ಆರೈಕೆ ಮಾಡಿದ ಆಶ್ರಮದ ಮುಖ್ಯಸ್ಥರಿಗೆ ಹೃದಯ ತುಂಬಿದ ಧನ್ಯವಾದ ಅರ್ಪಿಸಿದರು.
ಯೂಸುಫ್ ನಾಪತ್ತೆಯಾದ ಮೇಲೆ ತಂದೆ, ತಾಯಿ, ಮಡದಿ, ಪುಟ್ಟ ಮಗಳು ಕಣ್ಣೀರು ಸುರಿಸಿ ಸರಿಯಾಗಿ ಅನ್ನ ಆಹಾರವು ಇಲ್ಲದೆ ಹುಡುಕಾಟ ನಡೆಸಿದ್ದಾರೆ. ಇದೀಗ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.