ರಾಜ್ಯದಲ್ಲಿ ಜಾತಿ, ಧರ್ಮ, ಭಾಷೆ ಸೇರಿ ವಿವಿಧ ವಿಷಯಗಳ ಮೇಲೆ ದ್ವೇಷ ಹರಡುವ ಭಾಷಣ ಮಾಡುವುದನ್ನು ನಿಯಂತ್ರಿಸಲು ಮುಂದಿನ ಬಜೆಟ್ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಲು ಕಾನೂನು ಇಲಾಖೆ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ದ್ವೇಷ ಭಾಷಣ ಸಾಬೀತಾದರೆ 3 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ನಗದು ದಂಡ ವಿಧಿಸಲು ಅವಕಾಶ ಮಾಡಿಕೊಡುವಂಥ ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ, ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ-2025 ಕರಡನ್ನು ಕಾನೂನು ಇಲಾಖೆ ಸಿದ್ಧಪಡಿಸುತ್ತಿದೆ. ಇದರಡಿ ಜಾತಿ, ಧರ್ಮ ಆಧರಿಸಿ ದ್ವೇಷ ಭಾಷಣ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ಅಂಗವೈಕಲ್ಯ ಬುಡಕಟ್ಟುವಿನ ಕುರಿತು ದ್ವೇಷ ಭಾಷಣ ಮಾಡುವಂತಿಲ್ಲ ಎಂಬುದನ್ನು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಈಗಾಗಲೇ ಭಾರತೀಯ ನಾಗರಿಕ ದಂಡ ಸಂಹಿತೆಯಲ್ಲಿ ದ್ವೇಷ ಭಾಷಣ ನಿಷಿದ್ಧವಾದರೂ ಇದಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ವಿಸ್ತೃತವಾಗಿ ಕರಡು ಸಿದ್ಧಪಡಿಸಲಾಗಿದೆ ಎಂದು ಕಾನೂನು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕೆ ಕರಡು ಸಿದ್ಧಪಡಿಸಿದ್ದು, ಕರಡು ಪ್ರತಿ ಅಂತಿಮಗೊಳಿಸಿದ ಬಳಿಕ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುವುದು. ಬಳಿಕ ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ವಿಧೇಯಕ ಮಂಡಿಸಲು ಉದ್ದೇಶಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಸದಸ್ಯರ ಅಭಿಪ್ರಾಯದಂತೆ ಮುಂದುವರೆಯಲು ನಿರ್ಧರಿಸಲಾಗಿದೆ. ಹೀಗಾಗಿ ವಿಧೇಯಕ ಮಂಡನೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಿದೆ.
ಕರಡಿನಲ್ಲಿ ಏನಿದೆ?:
ಭಾಷೆ, ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ ವಿಚಾರವಾಗಿ ದ್ವೇಷ ಭಾಷಣ ಮಾಡುವಂತಿಲ್ಲ.
ಜತೆಗೆ ಯಾವುದೇ ವ್ಯಕ್ತಿಗೆ ಹಾನಿ ಮಾಡುವ, ದ್ವೇಷ ಉತ್ತೇಜಿಸುವ, ಅದನ್ನು ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 5 ಸಾವಿರ ರು.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಶಿಕ್ಷೆ ವ್ಯಾಪ್ತಿಗೆ ತರಲು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.
ಯಾವುದೇ ದತ್ತಾಂಶ, ಸಂದೇಶ, ಪಠ್ಯ ಚಿತ್ರಗಳು, ಧ್ವನಿ, ಧ್ವನಿ ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂ, ಸಾಫ್ಟ್‌ವೇರ್ ಮತ್ತು ಡೇಟಾಬೇಸ್ ಕೂಡ ಕಾನೂನು ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಇದರಡಿ ಯಾವುದೇ ರೀತಿಯಲ್ಲಿ ದ್ವೇಷ ಹರಡಲು ಬಳಕೆಯಾಗುವ ವ್ಯಕ್ತಿ, ಪ್ರಸಾರ ಮಾಡುವ ವಾಹಿನಿಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು,
ಸರ್ಚ್ ಎಂಜಿನ್‌ಗಳನ್ನು ಕೂಡ ಕಾನೂನು ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕರಡಲ್ಲಿರುವುದೇನು?- ಭಾಷೆ, ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಲೈಂಗಿಕತೆ, ಜನ್ಮಸ್ಥಳ ವಿಚಾರವಾಗಿ ದ್ವೇಷ ಭಾಷಣ ಮಾಡುವಂತಿಲ್ಲ- ಯಾವುದೇ ವ್ಯಕ್ತಿಗೆ ಹಾನಿ ಮಾಡುವ, ದ್ವೇಷ ಉತ್ತೇಜಿಸುವ, ಅದನ್ನು ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ, 5 ಸಾವಿರ ರು.ವರೆಗೆ ದಂಡ ವಿಧಿಸಲು ಅವಕಾಶ – ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯನ್ನೂ ಶಿಕ್ಷೆ ವ್ಯಾಪ್ತಿಗೆ ತರಲು ಕರಡಿನಲ್ಲಿ ಪ್ರಸ್ತಾಪ ಮುಂದೇನು? – ರಾಜ್ಯ ಕಾನೂನು ಇಲಾಖೆ ಕರಡು ಮಸೂದೆಯನ್ನು ಸಿದ್ಧಪಡಿಸುತ್ತಿದೆ- ಅಂತಿಮವಾದ ಬಳಿಕ ಸಚಿವ ಸಂಪುಟದ ಒಪ್ಪಿಗೆಗೆ ಕಳುಹಿಸಲಾಗುತ್ತದೆ- ಸಂಪುಟದಲ್ಲಿ ಒಪ್ಪಿಗೆ ಸಿಕ್ಕರೆ ಬಜೆಟ್ ಅಧಿವೇಶನದಲ್ಲಿ ಮಂಡನೆ ಆಗುತ್ತೆ- ವಿಧೇಯಕ ಮಂಡನೆ ಬಗ್ಗೆ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ಸಂಭವ
Leave a comment