“ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಅವರಿಗೆ ಹುಚ್ಚು ನಾಯಿ ಕಚ್ಚಿದೆ” ಎಂದು ಶನಿವಾರ ಕಿಡಿ ಕಾರಿದ್ದಾರೆ.
ಇಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು, ದೇವರ ಹೆಸರು ಸಾವಿರ ಬಾರಿ ಜಪಿಸಿದರೆ ಏಳು ಜನ್ಮದಲ್ಲಿಯೂ ಸ್ವರ್ಗ ಪ್ರಾಪ್ತಿಯಾಗುತ್ತೋ ಇಲ್ಲವೋ ಗೊತ್ತಿಲ್ಲ.
ಆದರೆ ಅಂಬೇಡ್ಕರ್ ಅವರ ಹೆಸರು ಹೇಳಿದರೆ ಈ ಜನ್ಮದಲ್ಲಿಯೇ ಸ್ವಾಭಿಮಾನದ ಬದುಕು ಸಿಗುತ್ತದೆ ಎಂದು ಹೇಳಿದರು.
ಏನ್ ಸಮಸ್ಯೆ ಅಂದ್ರೆ ಇವರ ಆಲೋಚನೆಯಲ್ಲಿ ಅಂಬೇಡ್ಕರ್ ಇಲ್ಲ. ಸಾಮಾಜಿಕ ಸಮಾನತೆ ಇಲ್ಲ. ಅಂಬೇಡ್ಕರ್ ಮತ್ತು ಬಸವ ತತ್ವಗಳು ಹೆಚ್ಚಾದಷ್ಟು ಆರ್‌ಎಸ್‌ಎಸ್ ಸಿದ್ಧಾಂತಗಳು ಕಡಿಮೆಯಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಸಿ.ಟಿ. ರವಿ ಅವರನ್ನು ಹೈಕೋರ್ಟ್ ಬಿಡುಗಡೆಗೊಳಿಸಿರುವ ಬಗ್ಗೆ ಬಿಜೆಪಿಯವರು ಸತ್ಯಕ್ಕೆ ಜಯ, ಕಾಂಗ್ರೆಸ್ ಗೆ ಮುಖಭಂಗ ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಮುಖಭಂಗ ಯಾಕಾಗುತ್ತದೆ?
ಎಫ್ ಎಸ್ ಎಲ್ ವರದಿ ಬರಲಿ ಆಮೇಲೆ ನೋಡೋಣ. ಕಾನೂನು ಕೇವಲ ಬಿಜೆಪಿಯವರಿಗೆ ಮಾತ್ರ ಗೊತ್ತಿಲ್ಲ ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.