ಮಹಾರಾಷ್ಟ್ರದಲ್ಲಿ ಡಿ.15 ರಂದು ಸಂಪುಟ ವಿಸ್ತರಣೆ ಮಾಡಲಾಗಿದ್ದು, 39 ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದ್ದಾರೆ.
ಖಾತೆ ಹಂಚಿಕೆಗೂ ಮೊದಲೇ ಸಂಪುಟ ವಿಸ್ತರಣೆ ಬಗ್ಗೆ ಮಹಾಯುತಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಶಿವಸೇನೆ ಶಾಸಕ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನರೇಂದ್ರ ಭೋಂಡೇಕರ್, ಶಿವಸೇನೆಯ ಉಪ ನಾಯಕ ಮತ್ತು ವಿದರ್ಭದ ಪಕ್ಷದ ಸಂಯೋಜಕರಾಗಿದ್ದರು.
ವಿದರ್ಭದಲ್ಲಿ 62 ಸ್ಥಾನಗಳ ಪ್ರದೇಶದಲ್ಲಿ ಮಹಾಯುತಿ ಮೈತ್ರಿ 47 ಸ್ಥಾನಗಳನ್ನು ಗೆದ್ದಿದೆ. ಭಂಡಾರ-ಪಾವನಿ ವಿಧಾನಸಭಾ ಕ್ಷೇತ್ರದ ಶಾಸಕ ನರೇಂದ್ರ ಭೋಂಡೇಕರ್ ವಿಧಾನಸಭೆಗೆ ರಾಜೀನಾಮೆ ನೀಡಿಲ್ಲ.
ಶಿವಸೇನೆಯಿಂದ ಮೂರು ಬಾರಿ ಶಾಸಕರಾಗಿದ್ದ ಭೋಂಡೇಕರ್ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು
. ಆದರೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಏಕನಾಥ್ ಶಿಂಧೆ, ಹಿರಿಯ ನಾಯಕರಾದ ಉದಯ್ ಸಾಮಂತ್ ಮತ್ತು ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರಿಗೆ ಸಂದೇಶಗಳನ್ನು ಕಳುಹಿಸಿದ ನಂತರ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದು, ಪತ್ರಿಕೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೂತನ ಸಂಪುಟದಲ್ಲಿ ಉದಯ್ ಸಮಂತ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮೂರು ವಾರಗಳ ನಂತರ ನಾಗ್ಪುರದಲ್ಲಿ 39 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಫಡ್ನವೀಸ್ ಇಂದು ತಮ್ಮ ಸಂಪುಟ ವಿಸ್ತರಣೆಯನ್ನು ಪೂರ್ಣಗೊಳಿಸಿದ್ದಾರೆ.
ಬಿಜೆಪಿಯಿಂದ 19 ಮಂದಿ ಶಿವಸೇನೆಯಿಂದ 11 ಮಂದಿ, ಎನ್ ಸಿಪಿಯಿಂದ 9 ಮಂದಿ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಫಡ್ನವಿಸ್ ಹಾಗೂ ಇಬ್ಬರು ಡಿಸಿಎಂಗಳನ್ನು ಸೇರಿ ಒಟ್ಟು 42 ಮಂದಿ ಸಚಿವರಿದ್ದಾರೆ.
ತಮಗೆ ನೀಡಿದ್ದ ಭರವಸೆಯನ್ನು ಫಡ್ನವಿಸ್ ಪೂರ್ಣಗೊಳಿಸಿಲ್ಲ ಈ ಬಗ್ಗೆ ನಡ್ಡಾ ಹಾಗೂ ಅಮಿತ್ ಶಾ ಜೊತೆ ಮಾತನಾಡುತ್ತೇನೆ ಎಂದು ಭೋಂಡೇಕರ್ ತಿಳಿಸಿದ್ದಾರೆ