“ಬೆಳಗಾವಿಯಲ್ಲಿ ಪ್ರತಿ ಬಾರಿ ಅಧಿವೇಶನ ನಡೆಯುವಾಗಲೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕ್ಯಾತೆ ತೆಗೆಯುವುದು ಸಾಮಾನ್ಯವಾಗಿ ಹೋಗಿದ್ದು, ಈ ಬಾರಿಯೂ ಸಂಭಾಜಿ ವೃತ್ತದ ಬಳಿ ಮಹಾಮೇಳಾವ್ ನಡೆಸುತ್ತಿದ್ದ ಎಂಇಎಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂಇಎಸ್ ಮುಖಂಡ ಮನೋಹರ ಕಿಣೇಕರ, ಆರ್ ಎಂ. ಪಾಟೀಲ್, ಪ್ರಕಾಶ ಶಿರೋಲಕರ್, ಪ್ರಕಾಶ ಮರ್ಗಾಳೆ ಸೇರಿ 20ಕ್ಕೂ ಅಧಿಕ ಜನರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಧಿವೇಶನಕ್ಕೆ ಒಂದು ದಿನ ಮುಂಚೆಯೇ ಬೆಳಗಾವಿಯಲ್ಲಿ ಮಹಾಮೇಳಾವ್ ನಡೆಸಲು ಎಂಇಎಸ್ ಮುಂದಾಗಿತ್ತು.
ಈ ಹಿನ್ನೆಲೆಯಲ್ಲಿ ಗೊಂದಲಗಳು ಸೃಷ್ಟಿಯಾಗುವುದನ್ನು ತಡೆಯುವ ಉದ್ದೇಶದಿಂದ ಹಾಗೂ ಮಹಾಮೇಳಾವಕ್ಕೆ ಬ್ರೇಕ್ ಹಾಕಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬೆಳಗಾವಿ ನಗರ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಅವರು ಈ ಭಾಗದಲ್ಲಿ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 9 ರಿಂದ 20 ವರೆಗೆ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಬೆಳಗಾವಿಯ ಟಿಳಕವಾಡಿ, ಕ್ಯಾಂಪ್, ಶಹಾಪೂರ, ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ವ್ಯಾಕ್ಸಿನ್ ಡಿಪೋ ಲೇಲೆ ಮೈದಾನ, ಧರ್ಮವೀರ ಸಂಭಾಜಿ ವೃತ್ತ, ಸಂಭಾಜಿ ಉದ್ಯಾನ ಹಾಗೂ ಶಿವಾಜಿ ಉದ್ಯಾನ ಭಾಗದಲ್ಲಿ ಮಹಾಮೇಳಾವ್ ನಡೆಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.