
ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 ಅನುಪಾತದ ಅರ್ಹತಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಹಾಗೂ ಇತರ ವಿವರಗಳನ್ನು ಆಯೋಗದ ಒಳಗಿನಿಂದಲೇ ಮಧ್ಯವರ್ತಿಗಳಿಗೆ ಒದಗಿಸಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್ ಸಿಯ ತಾಂತ್ರಿಕ ಸಹಾಯಕ ಶರಣಪ್ಪ ಅಡವಳ್ಳಿ ಮತ್ತು ಹಿರಿಯ ಸಹಾಯಕ ಸ್ವಾಮಿದಾಸ್ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. 
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಆಯೋಗಕ್ಕೆ ದೂರು ನೀಡಿದ್ದರು. ಮಧ್ಯವರ್ತಿಗಳು ಕರೆ ಮಾಡಿ, “ನಾವು ಆಯೋಗದವರೇ, ಲಕ್ಷಾಂತರ ರೂಪಾಯಿ ನೀಡಿದರೆ ಉದ್ಯೋಗ ಖಚಿತ” ಎಂದು ಹೇಳಿರುವ ಆಡಿಯೋ ಹಾಗೂ ವಾಟ್ಸ್‌ಆಪ್ ದಾಖಲೆಗಳನ್ನು ಅವರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಗದ ಸಹಾಯಕ ಕಾರ್ಯದರ್ಶಿ ಬಿ.ಎನ್. ಶೋಭಾ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 
ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಮೊದಲ ಹಂತದಲ್ಲಿ ಮೂವರು ಮಧ್ಯವರ್ತಿಗಳನ್ನು ಬಂಧಿಸಿದ್ದರು. ಅವರ ವಿಚಾರಣೆ ವೇಳೆ ಮತ್ತೊಬ್ಬ ಆರೋಪಿಯ ಹೆಸರು ಬಹಿರಂಗವಾಗಿದ್ದು, ಬಳಿಕ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತರ ಮಾಹಿತಿ ಆಧರಿಸಿ ಆಯೋಗದ ಒಳಗಿನಿಂದಲೇ ಮಾಹಿತಿ ಸೋರಿಕೆಯಾಗಿರುವುದು ಸ್ಪಷ್ಟವಾಗಿದ್ದು, ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.

Leave a comment