ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಯುಎಇಗೆ ಸೇರಿದ ಎರಡು ತೈಲ ಸಾಗಣೆ ಹಡಗುಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ನಾವಿಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಇದರಂತೆ ಇರಾನ್‌ನ ಹಿರಿಯ ರಾಜತಾಂತ್ರಿಕ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿದೆ.
ಇರಾನ್‌ನ ಉಪ ರಾಯಭಾರಿ ಮೊಹಮ್ಮದ್ ಜವಾದ್ ಹೊಸೇನಿ ಸೇರಿದಂತೆ ಹಿರಿಯ ರಾಜತಾಂತ್ರಿಕರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ಕ್ಕೆ ಕರೆಸಲಾಗಿದ್ದು, ಇತ್ತೀಚಿನ ಸಮುದ್ರ ದಾಳಿಯ ಕುರಿತು ಭಾರತದ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಇರಾನ್ ರಾಜತಾಂತ್ರಿಕ ಅಧಿಕಾರಿಗಳು ನವದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಕಚೇರಿಯಿಂದ ಹೊರಬರುತ್ತಿರುವುದು ಕಂಡುಬಂದಿತು.
ಯುಎಇ ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಹಾರ್ಮುಜ್ ಜಲಸಂಧಿಯ ದಕ್ಷಿಣ ಭಾಗದಲ್ಲಿ ಒಮಾನ್‌ನ ಪ್ರಾದೇಶಿಕ ಸಮುದ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಯುಎಇ ಧ್ವಜ ಹೊಂದಿದ್ದ ‘ಮೊಂಬಾಸಾ’ ತೈಲ ಟ್ಯಾಂಕರ್ ಹಾಗೂ ‘ಬಹಿಯಾ’ ಎಲ್‌ಎನ್‌ಜಿ ಸಾಗಣೆ ಹಡಗುಗಳ ಮೇಲೆ ಇರಾನ್ ಕ್ರೂಸ್ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಮೊಂಬಾಸಾ ಹಡಗಿನಲ್ಲಿದ್ದ ಓರ್ವ ಭಾರತೀಯ ಪ್ರಜೆ ಮೃತಪಟ್ಟಿದ್ದು, ಒಟ್ಟು ಎಂಟು ನಾವಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಆರು ಮಂದಿ ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳಾಗಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಕ್ಷಿಪಣಿ ದಾಳಿಯಿಂದ ಎರಡೂ ವಾಣಿಜ್ಯ ಹಡಗುಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ರಕ್ಷಣಾ ತಂಡಗಳ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ, ಹಡಗುಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಈ ದಾಳಿಯನ್ನು ಯುಎಇ ತೀವ್ರವಾಗಿ ಖಂಡಿಸಿದ್ದು, ಇದನ್ನು “ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ” ಎಂದು ಬಣ್ಣಿಸಿದೆ. “ಈ ಬೆಳವಣಿಗೆಗೆ ಪ್ರತಿಕ್ರಿಯಿಸುವ ಹಾಗೂ ನಮ್ಮ ಭೂಪ್ರದೇಶ, ಜನರು ಮತ್ತು ನಿವಾಸಿಗಳ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಹಕ್ಕು ಯುಎಇಗೆ ಇದೆ” ಎಂದೂ ಎಚ್ಚರಿಕೆ ನೀಡಿದೆ.
ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಇದೂವರೆಗೆ 11 ಭಾರತೀಯರು ಮೃತಪಟ್ಟಿದ್ದಾರೆ. ಹಡಗುಗಳು ಮತ್ತು ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗಳ ಬಳಿಕ ಹಲವು ನಾವಿಕರನ್ನು ರಕ್ಷಿಸಲಾಗಿದೆ. ಕಳೆದ ತಿಂಗಳು ಅಮೆರಿಕ ನಡೆಸಿದ ದಾಳಿಯಲ್ಲಿ ಪಲಾವು ಧ್ವಜ ಹೊಂದಿದ್ದ ಎಂಟಿ ಸೆಟ್ಬೆಲ್ಲೊ ಟ್ಯಾಂಕರ್‌ನಲ್ಲಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು.
ಹಾರ್ಮುಜ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ವಿಶ್ವದ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಇತ್ತೀಚಿನ ಬೆಳವಣಿಗೆಗಳು ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇರಾನ್‌ನ ಅರೆ ಅಧಿಕೃತ ಮಾಧ್ಯಮ ಟಾಸ್ನಿಮ್, “ಉಲ್ಲಂಘನೆ ನಡೆಸಿದ ಹಲವು ಹಡಗುಗಳನ್ನು ಗುರಿಯಾಗಿಸಲಾಗಿದೆ” ಎಂದು ವರದಿ ಮಾಡಿತ್ತು. ಇರಾನ್ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿ ಕೂಡ ಅಮೆರಿಕದ “ಶತ್ರು ಹಡಗು” ಎಂದು ಉಲ್ಲೇಖಿಸಿ, ಇರಾನ್ ನೌಕಾಪಡೆ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ವರದಿ ಮಾಡಿತ್ತು.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯ ನಿಯಂತ್ರಣದ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಅಮೆರಿಕ ಹೊಸ ಕ್ರಮ ಇದೇ ವೇಳೆ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಇರಾನ್‌ನೊಳಗಿನ ಹಲವು ಗುರಿಗಳ ಮೇಲೆ ಹೊಸ ಸುತ್ತಿನ ದಾಳಿ ನಡೆಸಿರುವುದಾಗಿ ತಿಳಿಸಿದೆ. ಈ ದಾಳಿಗಳು ಇರಾನ್ ಪಡೆಗಳ ಮೇಲೆ ಭಾರೀ ಒತ್ತಡ ಹೇರುತ್ತವೆ ಹಾಗೂ ಹೋರ್ಮುಜ್ ಜಲಸಂಧಿಯಲ್ಲಿ ನಾಗರಿಕರು ಮತ್ತು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಕುಗ್ಗಿಸುತ್ತವೆ ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಕಠಿಣ ನೌಕಾ ನಿರ್ಬಂಧವನ್ನು ಮರು ಜಾರಿಗೆ ತರುವುದಾಗಿ ಘೋಷಿಸಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಕೆಲವು ಸರಕುಗಳಿಗೆ ಶೇ.20ರಷ್ಟು ಶುಲ್ಕ ವಿಧಿಸುವುದಾಗಿ ಹೇಳಿದ್ದಾರೆ.
ನಾವು ವಿಶ್ವದ ಅತ್ಯಂತ ಪ್ರಮುಖ ಪ್ರದೇಶವೊಂದರ ರಕ್ಷಣೆಯನ್ನು ಮಾಡುತ್ತಿದ್ದೇವೆ. ಅದಕ್ಕಾಗಿ ವೆಚ್ಚ ಮಾಡುತ್ತಿದ್ದೇವೆ. ಹೀಗಾಗಿ ರಕ್ಷಣೆಯ ವೆಚ್ಚವನ್ನು ಮರಳಿ ಪಡೆಯಬೇಕಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಪ್ರಕಾರ, ಈ ನಿರ್ಬಂಧವು ಇರಾನ್ ಬಂದರುಗಳಿಗೆ ಹೋಗುವ ಮತ್ತು ಅಲ್ಲಿಂದ ಬರುವ ಹಡಗುಗಳಿಗೆ ಅನ್ವಯಿಸಲಿದ್ದು, ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸದ ಇತರ ವಾಣಿಜ್ಯ ಹಡಗುಗಳ ಸಂಚಾರ ಮುಂದುವರಿಯಲಿದೆ.
Leave a comment