ಲಾಹೋರ್: ಭಾರತದ ಪ್ರಧಾನಿ ಮೋದಿ ಅಖಂಡ ಭಾರತದ ಕುರಿತು ಮಾಡಿದ್ದ ಭಾಷಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲಿ ಕೆಲ ಪ್ರದೇಶಗಳಿಗೆ ಅಖಂಡ ಭಾರತ ಮೂಲದ ಹಿಂದೂ ಹೆಸರುಗಳನ್ನು ಮರು ನಾಮಕರಣ ಮಾಡಲಾಗುತ್ತಿದೆ. ದೇಶ ವಿಭಜನೆಯ ನಂತರ ಪಾಕಿಸ್ತಾನ ಮತ್ತೆ ಮಹತ್ವದ ಘಟನೆಗೆ ವೇದಿಕೆಯಾಗಿದ್ದು, ವಿಭಜನೆಯ ನಂತರದಿಂದಲೇ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳು ಮತ್ತು ಸಿಖ್ ಸಮುದಾಯದವರ ಸ್ಥಿತಿ ಗಂಭೀರ ಚಿಂತೆಯ ವಿಷಯವಾಗಿಯೇ ಉಳಿದಿದೆ. ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರ ಸೃಷ್ಟಿ ಬಳಿಕ ಅಲ್ಲಿನ ಪ್ರದೇಶಗಳಿಗೆ ಭಾರತ ಮೂಲದ ಹೆಸರುಗಳನ್ನು ಕೈ ಬಿಟ್ಟು ಇಸ್ಲಾಮೀ ಹೆಸರುಗಳನ್ನು ಇಡಲಾಗಿತ್ತು. 
ಆದರೆ ಬರೊಬ್ಬರಿ 8 ದಶಕಗಳ ಬಳಿಕ ಅಚ್ಚರಿ ಬೆಳವಣಿಗೆಯಲ್ಲಿ ಪಾಕಿಸ್ತಾನ ಇದೀಗ ಮತ್ತೆ ಆ ಪ್ರದೇಶಗಳಿಗೆ ಮರು ನಾಮಕರಣ ಮಾಡಿದ್ದು, ಅದರಲ್ಲೂ ಭಾರತ ಮೂಲದ ಹಿಂದೂ ಹೆಸರುಗಳನ್ನು ಇಡುತ್ತಿದೆ. ಐತಿಹಾಸಿಕ ನಗರಿ ಲಾಹೋರ್ ಪ್ರಮುಖ ಪ್ರದೇಶಗಳ ಹೆಸರು ನಾಮಕರಣ ಮಾಡಲಾಗಿದ್ದು, ಒಂದಲ್ಲ ಎರಡಲ್ಲ ಬರೊಬ್ಬರಿ 15 ಪ್ರದೇಶಗಳ ಇಸ್ಲಾಮೀ ಹೆಸರನ್ನು ಕೈ ಬಿಟ್ಟು ಭಾರತ ಮೂಲದ ಹೆಸರುಗಳನ್ನು ಇಡಲಾಗಿದೆ. ಅಚ್ಚರಿ ಎಂದರೆ ಪಾಕಿಸ್ತಾನದ ಈ ಪ್ರಕ್ರಿಯೆ ಅಲ್ಲಿ ಬಹುತೇಕ ಯಾವುದೇ ಸಂಘಟಿತ ವಿರೋಧವಿಲ್ಲದೇ ನಡೆಯುತ್ತಿದೆ.
ಗತಕಾಲದ ಹೆಸರುಗಳು ಭಾರತದಿಂದ ಪಾಕಿಸ್ತಾನ ವಿಭಜನೆಯಾದ ಸುಮಾರು ಎಂಭತ್ತು ವರ್ಷಗಳ ಬಳಿಕ, ಪಾಕಿಸ್ತಾನದ ಲಾಹೋರ್ ನಗರದ ಬೀದಿಗಳು ತಮ್ಮ ಇಸ್ಲಾಮೀಕೃತ ಗುರುತನ್ನು ಬಿಟ್ಟು, ಹಳೆಯ ಹಿಂದೂ, ಸಿಖ್, ಜೈನ ಹಾಗೂ ವಸಾಹತುಶಾಹಿ ಕಾಲದ ಹೆಸರಗಳಿಗೆ ಮರಳುತ್ತಿವೆ. ಈಗ ಇಸ್ಲಾಂಪುರಾ ಪ್ರದೇಶದ ಅಧಿಕೃತ ಫಲಕಗಳಲ್ಲಿ “ಕೃಷ್ಣ ನಗರ” ಎಂದು ಕಾಣಿಸುತ್ತಿದ್ದು, “ಬಾಬ್ರಿ ಮಸೀದಿ ಚೌಕ್” ಮತ್ತೆ “ಜೈನ ಮಂದಿರ ಚೌಕ್” ಆಗಿ ಬದಲಾಗಿದೆ. ಇನ್ನು “ರಹ್ಮಾನ್ ಗಲಿ”ಯು ಮತ್ತೆ “ರಾಮ್ ಗಲಿ” ಎಂಬ ಹೆಸರನ್ನು ಪಡೆದುಕೊಂಡಿದೆ.
ಕಳೆದ ಎರಡು ತಿಂಗಳಲ್ಲಿ ಕನಿಷ್ಠ 9 ರಿಂದ 15 ಪ್ರದೇಶಗಳ ಹೆಸರುಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಇನ್ನೂ ಅನೇಕ ಸ್ಥಳಗಳನ್ನು ಅವುಗಳ “ಹಳೆಯ ವೈಭವಕ್ಕೆ” ಮರಳಿಸಲು ಸಿದ್ಧತೆ ನಡೆಯುತ್ತಿದೆ. ಏನಿದು ಮರುನಾಮಕರಣ ಪ್ರಕ್ರಿಯೆ? ಈ ಮರುನಾಮಕರಣ ಅಭಿಯಾನವು ಪಾಕಿಸ್ತಾನದ ಪಂಜಾಬ್ ಸರ್ಕಾರ ಕೈಗೊಂಡಿರುವ ‘ಲಾಹೋರ್ ಹೆರಿಟೇಜ್ ಏರಿಯಾ ರಿವೈವಲ್’ ಯೋಜನೆಯ ಭಾಗವಾಗಿದೆ. ಇದರ ಉದ್ದೇಶ, ವಿಭಜನೆಗೂ ಮುನ್ನದ ಲಾಹೋರ್ ನಗರದ ಸಾಂಸ್ಕೃತಿಕ ಪರಂಪರೆಯನ್ನು ಮರುಜೀವಂತಗೊಳಿಸುವುದಾಗಿದೆ.
ಇದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದರ ಮೌಲ್ಯ ಸುಮಾರು 50 ಬಿಲಿಯನ್ ಪಾಕಿಸ್ತಾನಿ ರೂಪಾಯಿ ಎಂದು ಹೇಳಲಾಗುತ್ತಿದೆ. ದಶಕಗಳ ನಿರ್ಲಕ್ಷ್ಯ, ಅಸ್ತವ್ಯಸ್ತ ನಗರೀಕರಣ ಮತ್ತು ಸೈದ್ಧಾಂತಿಕ ಬದಲಾವಣೆಗಳಿಂದ ಹಾನಿಗೊಳಗಾದ ನಗರದ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಗುರುತನ್ನು ಮರುಸ್ಥಾಪಿಸುವುದು ಯೋಜನೆಯ ಗುರಿಯಾಗಿದೆ. 
ಈ ಯೋಜನೆಯನ್ನು 2025ರಲ್ಲಿ ನವಾಜ್ ಶರೀಫ್ ಹಾಗೂ ಅವರ ಪುತ್ರಿ, ಪಂಜಾಬ್ ಪ್ರಾಂತ್ಯದ ಪ್ರಸ್ತುತ ಮುಖ್ಯಮಂತ್ರಿ ಮಾರ್ಯಮ್ ನವಾಜ್ ಆರಂಭಿಸಿದ್ದರು. ಯುರೋಪಿನ ರಾಷ್ಟ್ರಗಳಂತೆ ಪಾಕಿಸ್ತಾನವೂ ತನ್ನ ಐತಿಹಾಸಿಕ ಪರಂಪರೆಯನ್ನು ಅಳಿಸಿಬಿಡದೇ ಸಂರಕ್ಷಿಸಬೇಕು ಎಂದು ಸರ್ಕಾರ ವಾದಿಸುತ್ತಿದೆ. ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು ‘ಹೆರಿಟೇಜ್ ಟೂರಿಸಂ’ ಅನ್ನು ಉತ್ತೇಜಿಸಿ, ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವುದಾಗಿದೆ.
ಯಾವ್ಯಾವ ಪ್ರದೇಶಗಳಿಗೆ ಯಾವ ಹೆಸರು ಮರುನಾಮಕರಣವಾಗಿದೆ? ಪ್ರಸ್ತುತ ಲಾಹೋರ್ ನ ಒಟ್ಟು 15 ಪ್ರದೇಶಗಳ ಇಸ್ಲಾಮಿಕ್ ಹೆಸರು ತೆರವು ಮಾಡಿ ಅಖಂಡ ಭಾರತ ಮೂಲದ ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ. ಮಿಂಟೋ ಪಾರ್ಕ್ ವಿವಾದ ನವಾಜ್ ಶರೀಫ್, ಮಿಂಟೋ ಪಾರ್ಕ್ (ಗ್ರೇಟರ್ ಇಕ್ಬಾಲ್ ಪಾರ್ಕ್) ನಲ್ಲಿ ಮೂರು ಕ್ರಿಕೆಟ್ ಮೈದಾನಗಳು ಹಾಗೂ ಒಂದು ಸಾಂಪ್ರದಾಯಿಕ ಅಖಾಡವನ್ನು ಮರುಸ್ಥಾಪಿಸುವ ಪ್ರಸ್ತಾವವನ್ನೂ ಮುಂದಿಟ್ಟಿದ್ದಾರೆ.
ಇದನ್ನು ಹಲವರು “ಹಾನಿ ನಿಯಂತ್ರಣ ತಂತ್ರ” ಎಂದು ನೋಡುತ್ತಿದ್ದಾರೆ. ನವಾಜ್ ಶರೀಫ್ ಅವರ ಸಹೋದರ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು 2015ರಲ್ಲಿ ಪಂಜಾಬ್ ಮುಖ್ಯಮಂತ್ರಿ ಆಗಿದ್ದ ವೇಳೆ, ನಗರಾಭಿವೃದ್ಧಿ ಯೋಜನೆಯ ಭಾಗವಾಗಿ ಮೂರು ಐತಿಹಾಸಿಕ ಕ್ರಿಕೆಟ್ ಮೈದಾನಗಳು ಮತ್ತು ಕುಸ್ತಿ ಅಖಾಡವನ್ನು ಧ್ವಂಸಗೊಳಿಸಿದ್ದಕ್ಕಾಗಿ ಭಾರೀ ಟೀಕೆಗೆ ಗುರಿಯಾಗಿದ್ದರು. ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಇಂಜಮಾಮ್ ಉಲ್ ಹಕ್ ಸೇರಿದಂತೆ ಅನೇಕ ಆಟಗಾರರು ಇದೇ ಮೈದಾನಗಳಲ್ಲಿ ತರಬೇತಿ ಪಡೆದಿದ್ದರು.
ರಾಷ್ಟ್ರ ವಿಭಜನೆಗೂ ಮೊದಲು ಭಾರತೀಯ ಕ್ರಿಕೆಟಿಗ ಲಾಲಾ ಅಮರ್ ನಾಥ್ ಕೂಡ ಇದೇ ಕ್ಲಬ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. 1978ರಲ್ಲಿ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಲಾಹೋರ್‌ಗೆ ಭೇಟಿ ನೀಡಿದಾಗ, ಅವರು ಮಿಂಟೋ ಪಾರ್ಕ್‌ಗೆ ತೆರಳಿ ತಮ್ಮ ಹಳೆಯ ಕ್ಲಬ್ ಆಟಗಾರರೊಂದಿಗೆ ಸಮಯ ಕಳೆದಿದ್ದರು. ಧ್ವಂಸಗೊಳಿಸಲಾದ ಕುಸ್ತಿ ಅಖಾಡದಲ್ಲಿ ಗೂಂಗಾ ಪಹಲ್ವಾನ್, ಇಮಾಮ್ ಬಕ್ಷ್ ಹಾಗೂ ಗಾಮಾ ಪಹಲ್ವಾನ್‌ಗಳಂತಹ ದಿಗ್ಗಜರು ಪೈಪೋಟಿ ನಡೆಸಿದ್ದರು. ವಿಭಜನೆಗೂ ಮುನ್ನ ಇದೇ ಮಿಂಟೋ ಪಾರ್ಕ್‌ನಲ್ಲಿ ಹಿಂದೂಗಳು ದಸರಾ ಹಬ್ಬವನ್ನು ಆಚರಿಸುತ್ತಿದ್ದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ.
ಹೆಸರು ಬದಲಾವಣೆಯ ಹಿಂದಿನ ನಿಜವಾದ ಕಾರಣ ರಾಷ್ಟ್ರ ವಿಭಜನೆಯ ನಂತರದಿಂದಲೇ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳು ಮತ್ತು ಸಿಖ್ ಸಮುದಾಯದವರ ಸ್ಥಿತಿ ಗಂಭೀರ ಚಿಂತೆಯ ವಿಷಯವಾಗಿಯೇ ಉಳಿದಿದೆ. ಅವರ ಮೇಲಿನ ಹಿಂಸಾಚಾರ, ಬಲವಂತದ ಮತಾಂತರ, ಆಸ್ತಿಗಳ ಅತಿಕ್ರಮಣ ಹಾಗೂ ಐತಿಹಾಸಿಕ ದೇವಾಲಯಗಳ ಧ್ವಂಸ ಘಟನೆಗಳು ಪದೇಪದೇ ವರದಿಯಾಗುತ್ತಿವೆ. ಆದರೂ, ದಶಕಗಳ ಕಾಲ ನಡೆದ ಇಸ್ಲಾಮೀಕರಣದ ಪರಿಣಾಮ ರೂಪುಗೊಂಡ ದೇಶದಲ್ಲಿ, ಹೆಸರು ಬದಲಾವಣೆಯ ಈ ಅಭಿಯಾನವು ಬಹುತೇಕ ಯಾವುದೇ ಸಂಘಟಿತ ವಿರೋಧವಿಲ್ಲದೇ ನಡೆಯುತ್ತಿದೆ. ಹಳೆಯ ಹೆಸರುಗಳನ್ನು ಮರುಸ್ಥಾಪಿಸುವ ಮೂಲಕ, ಪಾಕಿಸ್ತಾನವು ಜಾಗತಿಕ ಸಮುದಾಯಕ್ಕೆ ವಿಶೇಷವಾಗಿ ಪಾಶ್ಚಾತ್ಯ ರಾಷ್ಟ್ರಗಳಿಗೆ ತಾನು “ಅತಿರೇಕಿ ರಾಷ್ಟ್ರ” ಎಂಬ ಚಿತ್ರಣದಿಂದ ಹೊರಬಂದು, ಸಹಿಷ್ಣು, ಬಹುಸಾಂಸ್ಕೃತಿಕ ಮತ್ತು ಸಮಾವೇಶಕಾರಿ ರಾಷ್ಟ್ರವಾಗುತ್ತಿದೆ ಎಂಬ ಸಂದೇಶ ನೀಡಲು ಯತ್ನಿಸುತ್ತಿದೆ.
FATF ಭೀತಿ ಪಾಕಿಸ್ತಾನವು ದೀರ್ಘಕಾಲದಿಂದ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ಆರೋಪಗಳಿಂದ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಲಾಹೋರ್‌ನಂತಹ ಪ್ರಮುಖ ಸಾಂಸ್ಕೃತಿಕ ಕೇಂದ್ರದಲ್ಲಿ ವಸಾಹತುಶಾಹಿ ಕಾಲದ ಹೆಸರುಗಳನ್ನು ಮರುಸ್ಥಾಪಿಸುವ ಮೂಲಕ, ಅತಿರೇಕವನ್ನು ಹಿಂದೆ ಬಿಟ್ಟು ಮುಂದೆ ಸಾಗುತ್ತಿದೆ ಎಂಬ ಕಥಾನಕವನ್ನು ನಿರ್ಮಿಸಲು ಅದು ಪ್ರಯತ್ನಿಸುತ್ತಿದೆ. ಇದರ ಮೂಲಕ ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅಥವಾ ಇತರ ಜಾಗತಿಕ ಸಂಸ್ಥೆಗಳು ಮತ್ತೆ ಕಠಿಣ ನಿರ್ಬಂಧ ಹೇರದಂತೆ ನೋಡಿಕೊಳ್ಳುವ ಉದ್ದೇಶವೂ ಇದೆ. ಇದೇ ವೇಳೆ, ಪಾಕಿಸ್ತಾನವು ಬದುಕುಳಿಯಲು ಇಂಟರ್ನ್ಯಾಷನಲ್ ಮನಿಟರಿ ಫಂಡ್ ನೆರವಿನ ಮೇಲೂ ಹೆಚ್ಚಿನ ಮಟ್ಟದಲ್ಲಿ ಅವಲಂಬಿತವಾಗಿದೆ
. IMF ಕೇವಲ ಆರ್ಥಿಕ ಅಂಕಿಅಂಶಗಳನ್ನಷ್ಟೇ ಅಲ್ಲ, ದೇಶದ ರಾಜಕೀಯ ಸ್ಥಿರತೆ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನೂ ಗಮನಿಸುತ್ತದೆ. ಈ ಮರುನಾಮಕರಣ ಅಭಿಯಾನವು ವಿದೇಶಿ ಹೂಡಿಕೆದಾರರು ಹಾಗೂ IMFಗೆ, ಪಾಕಿಸ್ತಾನವು ಸುರಕ್ಷಿತ ಮತ್ತು ಉದಾರ ಹೂಡಿಕೆ ತಾಣವಾಗಿ ರೂಪುಗೊಳ್ಳುತ್ತಿದೆ ಎಂಬ ಭರವಸೆ ನೀಡುವ ಪ್ರಯತ್ನವಾಗಿರಲೂ ಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ
Leave a comment