ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ನಂತರ ಅವರಿಂದಲೇ ಪಕ್ಷ ಹಾಳಾಯ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಅವರು ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಮಾಜಿ ಸಿಎಂ ಬಿಸಿ ಪಾಟೀಲ್ ಅವರುಕೆಂಡಾಮಂಡಲವಾಗಿದ್ದಾರೆ. 
ಕೆಎಸ್ ಈಶ್ವರಪ್ಪ ಅವರ ಆರೋಪಕ್ಕೆ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಬಿಸಿ ಪಾಟೀಲ್ ಅವರು, ಈಶ್ವರಪ್ಪ ಎಚ್ಚರಿಕೆಯಿಂದ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಾವೆಲ್ಲ ಬಿಜೆಪಿಗೆ ಬರುವಾಗ ನಿಮ್ಮ ಯಾವ ಶ್ರಮವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. 
ಅಂದು ನಮ್ಮ ಶ್ರಮದಿಂದಲೇ ನೀವು ಮಂತ್ರಿಯಾಗಿ ಲಂಚವನ್ನು ಪಡೆದು ಬೆಳಗಾವಿಯಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಕಾರಣರಾದಿರಿ. ಈಗ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಿ. ನಮ್ಮಿಂದ ಬಿಜೆಪಿ ಹಾಳಾಗಲಿಲ್ಲ ಎಂದು ಬಿಸಿ ಪಾಟೀಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಇತ್ತೀಚಿಗೆ ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಎಂಎಲ್‌ಸಿಗಳನ್ನು ಖರೀದಿ ಮಾಡುವ ಕೆಲಸ ನಡೆದಿದೆ. ಇದರಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಅಂತ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದರು.
ಅಲ್ಲದೆ ಈ ಹಿಂದೆ 17 ಜನ ಕಾಂಗ್ರೆಸ್ ಶಾಸಕರನ್ನು ದುಡ್ಡು ಕೊಟ್ಟು ನಮ್ಮ ಪಕ್ಷಕ್ಕೆ ಕರೆದುಕೊಂಡಿದ್ದೆವು. ಅದರಿಂದ ಬಿಜೆಪಿ ಅಧಿಕಾರಕ್ಕೆ ಬಂತು. ನಂತರ ಪಕ್ಷ ಅವರಿಂದ ಹಾಳಾಗಿ ಹೋಯ್ತು. ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅದು ಹೊರಗೆ ಬರಬೇಕು ಎಂದು ಹೇಳಿದ್ದರು

Leave a comment