ರಾಮನಗರ: ಅಂದಾಜು 115 ಎಕರೆ 35 ಗುಂಟೆ ವಿಸ್ತೀರ್ಣ ಪ್ರದೇಶದಲ್ಲಿ 50:50 ರೈತರ ಸಹಭಾಗಿತ್ವದಲ್ಲಿ ವಸತಿ ಯೋಜನೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಪೂರ್ವಾನುಮತಿ ನೀಡಿದ್ದಾರೆ. ಉದ್ದೇಶಿತ ವಸತಿ ಬಡಾವಣೆ ಯೋಜನೆ ಜಿಲ್ಲಾ ಕೇಂದ್ರ ರಾಮನಗರದಿಂದ 2-3 ಕಿ.ಮೀ ಅಂತರದಲ್ಲಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣ ಯೋಜನೆ ಬೆನ್ನಲ್ಲೇ ಜಿಲ್ಲಾ ಕೇಂದ್ರದ ಬಳಿ ರಾಮನಗರ ಉಪನಗರ ವಸತಿ ( ರಾಮನಗರ ಟೌನ್‌ಶಿಪ್ ) ಯೋಜನೆ ಅನುಷ್ಠಾನಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡಿದೆ 2008ರಲ್ಲಿ ಮೂರು ವಸತಿ ಬಡಾವಣೆ ಗಳನ್ನು ಅಭಿವೃದ್ಧಿ ಪಡಿಸಿದ್ದ ಅವಿಭಜಿತ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ, 18 ವರ್ಷಗಳ ನಂತರ ಇದೀಗ ಮತ್ತೊಂದು ಬೃಹತ್ ವಸತಿ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ರಾಮನಗರ ತಾಲೂಕು ಕಸಬಾ ಹೋಬಳಿ ಅರ್ಚಕರಹಳ್ಳಿ ಗ್ರಾಮದ ಬಳಿ ಅಂದಾಜು 115 ಎಕರೆ 35 ಗುಂಟೆ ವಿಸ್ತೀರ್ಣ ಪ್ರದೇಶದಲ್ಲಿ 50:50 ರೈತರ ಸಹಭಾಗಿತ್ವದಲ್ಲಿ ವಸತಿ ಯೋಜನೆ ಮಾಡುವ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಪೂರ್ವಾನುಮತಿ ನೀಡಿದ್ದಾರೆ.

ರೈತರ 115 ಎಕರೆ ಭೂಮಿ ಸೇರಿದಂತೆ ಒಟ್ಟು 148 ಎಕರೆ ವಿಸ್ತೀರ್ಣದ ಈ ವಸತಿ ಬಡಾವಣೆಯಲ್ಲಿ ಶೇ.50 ರಷ್ಟು ಭೂ ಪ್ರದೇಶ ವನ್ನು ವಸತಿ ಉದ್ದೇಶಕ್ಕಾಗಿ ಮೀಸಲಿಡಲಾಗುತ್ತಿದೆ. ಉದ್ಯಾನವನ ನಿರ್ಮಾಣಕ್ಕೆ ಶೇ.15, ರಸ್ತೆ ಮತ್ತು ಸಾರಿಗೆ ಸೌಲಭ್ಯಕ್ಕೆ ಶೇ.20, ಶೇ.3ರಷ್ಟು ಭೂಮಿ ವಾಣಿಜ್ಯ ಪ್ರದೇಶ ಹಾಗೂ ನಾಗರಿಕರ ಸೌಕರ್ಯಗಳಿಗೆ ಶೇ.10 ರಷ್ಟು ಪ್ರದೇಶವನ್ನು ಮೀಸಲಿಡಲಾಗುತ್ತಿದೆ. 20 ಸಾವಿರ ಅಂದಾಜು ಜನಸಂಖ್ಯೆ: ನಗರಾಭಿವೃದ್ಧಿ ಪ್ರಾಧಿಕಾರದ ಉದ್ದೇಶಿತ ವಸತಿ ಬಡಾವಣೆ ಅಂದಾಜು 20 ಸಾವಿರ ಜನಸಂಖ್ಯೆ ಹೊಂದುವ ಸಾಮರ್ಥ್ಯವಿದೆ. ಈ ಬಡಾವಣೆಯಲ್ಲಿ ಒಂದು ಕರೆಯನ್ನೂ ಸಹ ಅಭಿವೃದ್ಧಿ ಮಾಡಲಾಗುತ್ತಿದೆ.
12, 15, 18, 24 ಮತ್ತು 30 ಮೀಟರ್‌ನ 7.3 ಕಿಲೋ ಮೀಟರ್ ಉದ್ದದ ಸುಸಜ್ಜಿತ ರಸ್ತೆಗಳು ರಾಮನಗರ ಟೌನ್‌ಶಿಪ್‌ನಲ್ಲಿ ಇರಲಿವೆ. ಐದು ಬಸ್ ನಿಲ್ದಾಣ, 14.6 ಕಿ.ಮೀಟರ್ ರಸ್ತೆ ಬದಿ ಚರಂಡಿ ವ್ಯವಸ್ಥೆ ಮತ್ತು ನೀರು ಸಬರಾಜು ಜಾಲವನ್ನು ಹೊಂದಿರಲಿದೆ.

ಉದ್ದೇಶಿತ ವಸತಿ ಬಡಾವಣೆ ಯೋಜನೆ ಜಿಲ್ಲಾ ಕೇಂದ್ರ ರಾಮನಗರದಿಂದ 2-3 ಕಿ.ಮೀ ಅಂತರದಲ್ಲಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ಪಕ್ಕದಲ್ಲೇ ಈ ಯೋಜನೆ ತಲೆ ಎತ್ತಲಿದ್ದು, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ, ಬೆಂಗಳೂರು ಮೈಸೂರು ಹಳೆಯ ಹೆದ್ದಾರಿ ನಡುವೆ ಇದೆ. 20 ರಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಜೈನ್ ವಿಶ್ವವಿದ್ಯಾಲಯ, ದಯಾನಂದ ಸಾಗರ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಲಭ್ಯವಿದ್ದು, ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್ ಹಾಗೂ ಮೈಸೂರು ವಿಮಾನ ನಿಲ್ದಾಣಕ್ಕೆ 90 ಕಿ.ಮೀಟರ್ ಅಂತರದಲ್ಲಿದೆ.”

Leave a comment