ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ ಮಾಡಿರುವುದರಿಂದ ಪ್ರಸ್ತುತವಾಗಿ ಏರಿಸಿದ್ದ ದರವನ್ನು ಈ ಕೂಡಲೇ ಕಡಿಮೆ ಮಾಡಿ ಹಿಂದೆ ಇದ್ದ ದರವನ್ನು ನಿಗದಿಪಡಿಸಿ ಬಡ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು, ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರ ,ಸಾರ್ವಜನಿಕರ ಹಾಗೂ ಕಾರ್ಮಿಕ ಮುಖಂಡರ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಗಣಿ ಅಧಿಕಾರಿಯವರಿಗೆ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯನ್ ಒತ್ತಾಯಿಸಿದ್ದಾರೆ.

“ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸುವ ಕೆಂಪು ಕಲ್ಲಿನ ದುಬಾರಿ ದರದ ಕುರಿತು ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ್ದ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದೆ. ಆದರೆ ಕೆಂಪು ಕಲ್ಲಿನ ದರ ಮಾತ್ರ ದುಬಾರಿಯಾಗಿದೆ. ಹಿಂದೆ 30 ರಿಂದ 35ರೂ.ಗಳಿಗೆ ಸಿಗುತ್ತಿದ್ದ ಕಲ್ಲಿನ ದರ ರಾಜಸ್ವ ಹೆಸರಿನಲ್ಲಿ 50ರಿಂದ 55 ರೂ. ವಸೂಲು ಮಾಡುತ್ತಿದ್ದಾರೆ. ದರ ಇಳಿಸದ ಕೆಂಪು ಕಲ್ಲು ಮಾಫಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು,ದರ ಏರಿಕೆಯಿಂದ ಬಡ, ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ತೊಂದರೆಯಾಗಿದೆ.

ಈ ಬಗ್ಗೆ ಸಾರ್ವಜನಿಕರು, ಹಾಗೂ ಮನೆ ನಿರ್ಮಾಣ ಮಾಡುತ್ತಿರುವ ಬಡವರಿಂದ ಸಾಕಷ್ಟು ದೂರುಗಳು ಬಂದಿದ್ದು, ಈ ಬಗ್ಗೆ ಸಭೆ ನಡೆಸಿ ಕ್ರಮ ವಹಿಸಬೇಕು. ಟೆಂಡರ್ ಆದಾರಿತ ಬ್ಲಾಕ್ ಹೆಚ್ಚಿಸಲು ಪ್ರಯತ್ನಿಸಿ,ವೈಜ್ಞಾನಿಕವಾಗಿ ಕೆಂಪು ಕಲ್ಲಿನ ದರ ನಿಗದಿ ಮಾಡಲು ಸೂಕ್ತ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಅಳವಡಿಸಬೇಕು” ಎಂದು ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಗಣಿ ಭೂವಿಜ್ಞಾನ ಅಧಿಕಾರಿಯವರಿಗೆ ನವೀನ್ ಸಾಲಿಯನ್ ಮನವಿ ಮಾಡಿದ್ದಾರೆ .

Leave a comment