“ಕೇಸರಿ ಬಟ್ಟೆ ಧರಿಸಿ ಮಾಂಸಾಹಾರ ಸೇವಿಸಿದ್ದಕ್ಕೆ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಲಖನೌದ ಗೋಸೈಗಂಜ್ ಪ್ರದೇಶದಲ್ಲಿರುವ ಡಾಬಾವೊಂದರಲ್ಲಿ ಭಾನುವಾರ ರಾತ್ರಿ 10:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಡಾಬಾದಲ್ಲಿ ಕೇಸರಿ ಬಟ್ಟೆ ಧರಿಸಿ ಚಿಕ್ಕನ್ ತಿನ್ನುತ್ತಿದ್ದ ಯುವಕನೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬಳಿಕ ಹಲ್ಲೆಗೊಳಗಾದ ಯುವಕ ಕೂಡಾ ತನ್ನ ಸಹಚರರೊಂದಿಗೆ ಸೇರಿಕೊಂಡು ಹಲ್ಲೆ ಮಾಡಿದವನಿಗೆ ಥಳಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾನೆ.
ಈ ಗಲಾಟೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಲಖನೌ ಪೊಲೀಸರು ಘಟನೆಯ ಕುರಿತು ತನಿಖೆಯನ್ನು ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಒಬ್ಬ ಯುವಕನನ್ನು ಬಂಧಿಸಿದ್ದಾರೆ.
Leave a comment