ವಿರೋಧ ಪಕ್ಷದ ನಾಯಕರು, ಶಾಸಕರು ಕೆಲಹೊತ್ತು ವಿಧೇಯಕ ಕುರಿತು ಚರ್ಚೆ ನಡೆಸಿದ ಬಳಿಕ ಅನುಮೋದನೆ ನೀಡಲಾಯಿತು. ಬೆಂಗಳೂರು ಆಡಳಿತ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದರೂ ಕೆಲವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಐದು ಹೊಸ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಈ ವಿಧೇಯಕದಲ್ಲಿ ಸ್ಪಷ್ಪಪಡಿಸಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಸದ್ಯದ ಕಾಯ್ದೆ ಪ್ರಕಾರ ಬೃಹತ್ ಬೆಂಗಳೂರು ಪ್ರಾಧಿಕಾರವು ಅಂತಹ ಅಧಿಕಾರವನ್ನು ಚಲಾಯಿಸುತ್ತದೆ ಮತ್ತು ಈ ಕಾಯಿದೆಯಡಿಯಲ್ಲಿ ರಚಿಸಲಾದ ನಗರ ನಿಗಮಗಳಿಗೆ ಸಂಬಂಧಿಸಿದಂತೆ ಈ ಕಾಯಿದೆಯ ನಿಬಂಧನೆಗಳ ಪ್ರಕಾರ ಅಂತಹ ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಣೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ರಚಿಸಲಾಗಿರುವ ಪಾಲಿಕೆಗಳ ವಿಚಾರದಲ್ಲಿ ಪ್ರಾಧಿಕಾರ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ಯಾರೋ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ.
ಹೀಗಾಗಿ ಈ ಅಂಶವನ್ನು ಪ್ರಸ್ತುತ ತಿದ್ದುಪಡಿ ವಿಧೇಯಕದಲ್ಲಿ ತೆಗೆದುಹಾಕಲಾಗಿದೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಿಲ್ಲ. ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಪಾಲಿಕೆಗಳ ಕಾರ್ಯ ಚಟುವಟಿಕೆಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಪನೆ ನೀಡಲು ಈ ತಿದ್ದುಪಡಿ ತರಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಅಡಿಯಲ್ಲಿ ಹೊಸದಾಗಿ ಐದು ನಗರ ಪಾಲಿಕೆಗಳನ್ನು ಸರ್ಕಾರ ನಿರ್ಧರಿಸಿದೆ. ಇವುಗಳ ಸಮನ್ವಯಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೂ ವಿಧೇಯಕ ಅವಕಾಶ ಒದಗಿಸಿದೆ. ಮೇಯರ್ ಮತ್ತು ಉಪ ಮೇಯರ್‌ಗೆ 30 ತಿಂಗಳ ಅವಧಿಯನ್ನು ಒದಗಿಸುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದರೆ, ಬೆಂಗಳೂರಿನ ಅಭಿವೃದ್ದಿ ಸಚಿವರು ಪದ ನಿಮಿತ್ತ ಉಪಾಧ್ಯಕ್ಷರಾಗಿರುತ್ತಾರೆ.
ಚರ್ಚೆ ವೇಳೆ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಗ್ರೇಟರ್ ಬೆಂಗಳೂರು ಕಾಯ್ದೆ ಅವಕಾಶ ನೀಡಬಹುದು ಎಂಬ ಬಿಜೆಪಿ ಶಾಸಕರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಸತೀಶ್ ರೆಡ್ಡಿ ಅವರ ಆಕ್ಷೇಪಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್, ಐದು ನಗರ ಪಾಲಿಕೆಗಳ ಚುನಾವಣೆ ಮುಗಿದ ನಂತರ ಹೊಸ ಪ್ರದೇಶಗಳನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸೇರಿಸಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಒಂದು ವೇಳೆ ಹಳ್ಳಿಗಳನ್ನು ಹೊಸ ಪ್ರದೇಶಗಳಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿದರೆ ಪಂಚಾಯಿತಿ ಸದಸ್ಯರು ಕಾರ್ಪೋರೇಟ್ ಸದಸ್ಯರಾಗಬಹುದು. ಚುನಾವಣೆ ಮುಗಿದ ನಂತರ ಪಂಚಾಯಿತಿ ಸದಸ್ಯರು ಕಾರ್ಪೋರೇಟರ್ ಆಗಬಹುದು ಎಂದು ಅವರು ಹೇಳಿದರು.
ಇಂಗ್ಲೀಷ್ ಪದಕ್ಕೆ ಆಕ್ಷೇಪ: ‘ಗ್ರೇಟರ್ ಬೆಂಗಳೂರು’ ಎಂಬ ಇಂಗ್ಲೀಷ್ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕನ್ನಡ ಪದವನ್ನು ಯಾಕೆ ಆಯ್ಕೆ ಮಾಡಲಿಲ್ಲ? ಎಂದು ಉಪ ಮುಖ್ಯಮಂತ್ರಿ ಅವರನ್ನು ಕೇಳಿದರು. ಬೃಹತ್ ಬೆಂಗಳೂರು ಪ್ರಾಧಿಕಾರ ರಚನೆಯು “ವಿಕೇಂದ್ರೀಕರಣದ ಮೇಲಿನ ದಾಳಿಯಾಗಿದ್ದು, ಇದು ಪಾಲಿಕೆಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಅವುಗಳನ್ನು ಸರ್ಕಾರದ ಮೇಲೆ ಅವಲಂಬಿತವಾಗಿಸುತ್ತದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಬೃಹತ್ ಬೆಂಗಳೂರು ಪ್ರಾಧಿಕಾರವು ಪಾಲಿಕೆಗಳ ನಡುವೆ ಮಾತ್ರ ಸಮನ್ವಯ ಸಾಧಿಸುತ್ತದೆ. ಐದು ನಿಗಮಗಳು ಸಂಪೂರ್ಣವಾಗಿ ಸ್ವಾಯತ್ತವಾಗಿರುತ್ತವೆ, ತಮ್ಮ ತೆರಿಗೆಗಳನ್ನು ಸಂಗ್ರಹಿಸಲು ಮತ್ತು ಸಂಗ್ರಹಿಸಿದ ತೆರಿಗೆಯನ್ನು ಖರ್ಚು ಮಾಡಲು ಸ್ವತಂತ್ರವಾಗಿರುತ್ತವೆ ಎಂದು ಹೇಳಿದರು.
Leave a comment