ಮೀರತ್: ದೇಶದಲ್ಲಿ ಇತೀಚಿಗೆ ಹಲ್ಲೆ,ದರೋಡೆ, ಕೊಲೆಯಂತಹ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೈನಿಕರಿಗೂ ಬೆಲೆ ಕೊಡುತ್ತಿಲ್ಲ. ಟೋಲ್ ಪ್ಲಾಜಾ ವೊಂದರ ಬಳಿ ಉಂಟಾದ ವಾಗ್ವಾದದ ವೇಳೆ ಸೇನಾ ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಯೋಧನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿ ಟೋಲ್ ಪ್ಲಾಜಾದ ನಾಲ್ವರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಕಪಿಲ್ ಕವಾಡ್ ಎಂಬ ಯೋಧ ಹಲ್ಲೆಗೊಳಗಾದವರು. ಭಾರತೀಯ ಸೇನೆಯ ರಜಪೂತ ರೆಜಿಮೆಂಟ್‌ನಲ್ಲಿದ್ದ ಇವರು, ರಜೆಯ ನಿಮಿತ್ತ ಮನೆಗೆ ತೆರಳಿದ್ದರು.
ಶ್ರೀನಗರದಲ್ಲಿರುವ ತಮ್ಮ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತನ್ನ ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ವಾಗ್ವಾದ ಉಂಟಾಗಿದೆ.
ಟೋಲ್ ಪ್ಲಾಜಾದ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರ ಸಂಬಂಧಿಯನ್ನು ಥಳಿಸಿದ್ದಾರೆ. ಕಪಿಲ್ ಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವು ದಾಳಿಕೋರರು ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ.
ಈ ಸಂಬಂಧ ಕೇಸ್ ದಾಖಲಾಗಿದೆ ಎಂದು ಎಸ್ ಪಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಕಪಿಲ್ ಅವರ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಸರೂರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ
Leave a comment