ಪಾಕಿಸ್ತಾನವು ಭಾರತಕ್ಕೆ ಯುದ್ಧ ಬೆದರಿಕೆಗಳನ್ನು ನೀಡುತ್ತಲೇ ಇತ್ತು, ಈ ಬಾರಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ ರಾಜಕಾರಣಿ ಬಿಲಾವಲ್ ಭುಟ್ಟೋ ಅವರು ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಡೆದ ಆಪರೇಷನ್ ಸಿಂಧೂರ ಮತ್ತು ದಶಕಗಳಷ್ಟು ಹಳೆಯ ಸಿಂಧೂ ನದಿ ಜಲ ಒಪ್ಪಂದ ರದ್ದುಗೊಳಿಸಿರುವ ವಿಚಾರವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವರು, ಭಾರತವು ಪಾಕಿಸ್ತಾನಕ್ಕೆ ‘ದೊಡ್ಡ ಹಾನಿ’ ಉಂಟುಮಾಡಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲ ಪಾಕಿಸ್ತಾನಿಗಳು ‘ಒಗ್ಗಟ್ಟಾಗಲು’ ಒತ್ತಾಯಿಸಿದರು.
ಸಿಂಧ್ ಸರ್ಕಾರದ ಸಂಸ್ಕೃತಿ ಇಲಾಖೆ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಭುಟ್ಟೊ, ‘ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸರ್ಕಾರದ ಕ್ರಮಗಳು ಪಾಕಿಸ್ತಾನಕ್ಕೆ ದೊಡ್ಡಹಾನಿಯನ್ನುಂಟುಮಾಡಿವೆ.
ಪ್ರಧಾನಿ ಮೋದಿ ಮತ್ತು ಈ ಆಕ್ರಮಣಗಳ ವಿರುದ್ಧ ನಾವು ಒಟ್ಟಾಗಿ ನಿಲ್ಲುವುದು ಅವಶ್ಯಕ’ ಎಂದು ಹೇಳಿದರು. ಭಾರತವು ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಪರಿಗಣಿಸದೆ ‘ಬೇರೆ ದಾರಿಯಿಲ್ಲ’ ಎಂದು ಎಚ್ಚರಿಸಿದ ಅವರು, ‘ನೀವು (ಪಾಕಿಸ್ತಾನಿಗಳು) ಆರು ನದಿಗಳನ್ನು ಮರಳಿ ಪಡೆಯುವಷ್ಟು ಯುದ್ಧಕ್ಕೆ ಬಲಿಷ್ಠರಾಗಿದ್ದೀರಿ.
ಭಾರತವು ಈ ಹಾದಿಯಲ್ಲಿ ಮುಂದುವರಿದರೆ, ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಯುದ್ಧದ ಸಾಧ್ಯತೆ ಸೇರಿದಂತೆ ಎಲ್ಲ ಆಯ್ಕೆಗಳನ್ನು ಪರಿಗಣಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ’ ಎಂದು ಅವರು ಹೇಳಿದರು
‘ನಾವು ಯುದ್ಧವನ್ನು ಪ್ರಾರಂಭಿಸಲಿಲ್ಲ. ಆದರೆ ನೀವು ಆಪರೇಷನ್ ಸಿಂಧೂರದಂತಹ ದಾಳಿಯನ್ನು ನಡೆಸುವ ಬಗ್ಗೆ ಯೋಚಿಸಿದರೆ, ಪಾಕಿಸ್ತಾನದ ಪ್ರತಿಯೊಂದು ಪ್ರಾಂತ್ಯದ ಜನರು ನಿಮ್ಮೊಂದಿಗೆ ಹೋರಾಡಲು ಸಿದ್ಧರಿದ್ದಾರೆ ಎಂಬುದನ್ನು ತಿಳಿಯಿರಿ ಮತ್ತು ಇದು ನೀವು ಖಂಡಿತವಾಗಿಯೂ ಸೋಲುವಂತಹ ಯುದ್ಧ. ನಾವು ತಲೆಬಾಗುವುದಿಲ್ಲ’ ಎಂದು ಭುಟ್ಟೋ ಎಚ್ಚರಿಸಿದರು.
‘ನಮ್ಮದು ಅಣ್ವಸ್ತ್ರ ಹೊಂದಿರುವ ರಾಷ್ಟ್ರ. ಒಂದು ವೇಳೆ ಯುದ್ಧ ನಡೆದು ನಾವು ನಾಶವಾಗುವುದು ಖಚಿತವಾದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ಸಹ ನಾಶಪಡಿಸುತ್ತೇವೆ. ಭಾರತವು ಅಣೆಕಟ್ಟು ನಿರ್ಮಿಸಿ, ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ತಡೆದರೆ ಆಣೆಕಟ್ಟೆಯನ್ನು ಧ್ವಂಸಗೊಳಿಸುತ್ತೇವೆ.
ನಮಗೆ ಕ್ಷಿಪಣಿಗಳ ಕೊರತೆಯಿಲ್ಲ. ಭಾರತ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ ಮತ್ತು ಅಣೆಕಟ್ಟೆ ನಿರ್ಮಾಣವಾದರೆ, ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತದ ಸ್ವತ್ತಲ್ಲ’ ಎಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರು ಅಮೆರಿಕದಲ್ಲಿ ಹೇಳಿಕೆ ನೀಡಿದ್ದರು.
ಇದಾದ ಒಂದು ದಿನದ ನಂತರ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದರಿಂದ 250 ಮಿಲಿಯನ್ ಜನರು ಹಸಿವಿನಿಂದ ಬಳಲುವ ಅಪಾಯವಿದೆ ಎಂದು ಪಾಕಿಸ್ತಾನಿ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
Leave a comment