“ಆಪರೇಷನ್ ಸಿಂಧೂರ್’ ವೇಳೆ ಪಾಕಿಸ್ತಾನದ ಆರು ಯುದ್ಧ ವಿಮಾನಗಳು ಹಾಗೂ ಮತ್ತೊಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥರು ಇಂದು ಬೆಳಿಗ್ಗೆ ಹೇಳಿದ್ದಾರೆ.
ಮೆಗಾ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ವಾಯು ನೌಕಾಪಡೆಗೆ ಉಂಟಾದ ದೊಡ್ಡ ಪ್ರಮಾಣದ ಹಾನಿಯನ್ನು ಬಹಿರಂಗಪಡಿಸಲಾಗಿದೆ. ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಆರು ಯುದ್ಧ ವಿಮಾನಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸಲಾಗಿದೆ.
ಜೊತೆಗೆ ಪಾಕಿಸ್ತಾನದ ಎರಡು ವಿಮಾನಗಳನ್ನು ನೆಲದ ಮೇಲೆ ನಾಶಪಡಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ವಾರ್ಷಿಕ 16ನೇ ಏರ್ ಚೀಫ್ ಮಾರ್ಷಲ್ ಎಲ್ ಎಂ ಕತ್ರೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ನಿರ್ಣಾಯಕ ವೈಮಾನಿಕ ದಾಳಿಯಲ್ಲಿ ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಪಾತ್ರವನ್ನು ಶ್ಲಾಘಿಸಿದ್ದಾರೆ.
ಮತ್ತೊಂದು ದೊಡ್ಡ ಹೊಡೆತ: ಧ್ವಂಸಗೊಂಡ ಮತ್ತೊಂದು ದೊಡ್ಡ ವಿಮಾನ ಬಹುಶಃ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ಅಥವಾ ಎಲೆಕ್ಟ್ರಾನಿಕ್ ಗುಪ್ತಚರದ ವಿಮಾನವಾಗಿದ್ದು, ಇದರ ಧ್ವಂಸ ಪಾಕಿಸ್ತಾನದ ವಾಯು ಬಲಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಅವರು ಹೇಳಿದ್ದಾರೆ.
ಮೇ 7 ರ ದಾಳಿಯ ಸಮಯದಲ್ಲಿ ದಾಳಿಗೊಳಗಾದ ಭಯೋತ್ಪಾದಕ ನೆಲೆಗಳ ಮೊದಲಿನ ಹಾಗೂ ನಂತರದ’ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡ ಏರ್ ಚೀಪ್ ಮಾರ್ಷಲ್, ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿದ ಪಾಕಿಸ್ತಾನದ ಬಹವಲ್‌ಪುರ ಶಿಬಿರದ ದೃಶ್ಯಗಳು ಹಾನಿ ಕುರಿತು ಸ್ಪಷ್ಟವಾಗಿ ತೋರಿಸುತ್ತವೆ.
“ಪಕ್ಕದ ಕಟ್ಟಡಗಳು ತಕ್ಕಮಟ್ಟಿಗೆ ಹಾಗೇ ಇವೆ. ನಮ್ಮಲ್ಲಿನ ಉಪಗ್ರಹ ಚಿತ್ರಗಳು ಮಾತ್ರವಲ್ಲದೆ, ಸ್ಥಳೀಯ ಮಾಧ್ಯಮಗಳಿಂದಲೂ ಈ ಚಿತ್ರಗಳನ್ನು ಪಡೆಯಬಹುದು ಎಂದು ಹೇಳಿದರು.
ಮೇ 7 ರಂದು ದಾಳಿಗೊಳಗಾದ ಒಂಬತ್ತು ಸ್ಥಳಗಳಲ್ಲಿ ಲಷ್ಕರ್-ಎ-ತೈಬಾದ ಪ್ರಧಾನ ಕಛೇರಿ ಮುರಿಡ್ಕೆ, ಅವರ ಹಿರಿಯ ನಾಯಕರ ವಸತಿ ಪ್ರದೇಶವಾಗಿತ್ತು. ಇವು ಅವರ ಕಚೇರಿ ಕಟ್ಟಡಗಳಾಗಿದ್ದು, ಅಲ್ಲಿ ಅವರು ಸಭೆಗಳನ್ನು ನಡೆಸಲು ಒಟ್ಟಿಗೆ ಸೇರುತ್ತಿದ್ದರು ಎಂದು ಅವರು ತಿಳಿಸಿದರು.
ಏಪ್ರಿಲ್ 22 ರಂದು 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7 ರಂದು ಆರಂಭಿಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಒಂಬತ್ತು ಭಯೋತ್ಪಾದಕ ಗುರಿಗಳನ್ನು ಹೊಡೆದು ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು.
Leave a comment