“ಡಾ.ವಿಷ್ಣುವರ್ಧನ್ ಅಭಿಮಾನಿಗಳು ಮತ್ತು ನಟ ಬಾಲಣ್ಣ ಕುಟುಂಬ ನಡುವಿನ ಕಲಹ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಸಮಾಧಿಯನ್ನು ರಾತ್ರೋ ರಾತ್ರಿ ಪೊಲೀಸ್ ಭದ್ರತೆಯಲ್ಲಿ ನೆಲಸಮ ಮಾಡಲಾಗಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿ ಸ್ಟುಡಿಯೋ ಮುಂಭಾಗದಲ್ಲಿ ನೆರೆದ ಸಾವಿರಾರು ಅಭಿಮಾನಿಗಳು, ಕಣ್ಣೀರು ಸುರಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಾಲಣ್ಣ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸಿದರು.
ಏಕಾಏಕಿನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಉತ್ತರಹಳ್ಳಿ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಕೆಲ ಅಭಿಮಾನಿಗಳನ್ನು ವಶಕ್ಕೆ ಪಡೆದುಕೊಂಡು, ಪ್ರತಿಭಟನೆಯನ್ನು ನಿಲ್ಲಿಸಿದರು.
ಡಾ.ವಿಷ್ಣುವರ್ಧನ್ ಸಮಾಧಿ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಇದೀಗ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಂಗೇರಿ ಠಾಣೆ ಪೊಲೀಸರಿಂದ ಸ್ಟುಡಿಯೋ ಸುತ್ತಮುತ್ತ ಬಿಗಿ ಭದ್ರತೆ ನೀಡಲಾಗಿದೆ.
ಬಹಳ ವರ್ಷಗಳಿಂದ ವಿವಾದ ನಡೆಯುತ್ತಿದ್ದು, ಡಾ.ವಿಷ್ಣುವರ್ಧನ್ ಅವರನ್ನು ಅಂತ್ಯಕ್ರಿಯೆ ಮಾಡಿದ ಅಭಿಮಾನ್ ಸ್ಟುಡಿಯೋದ ಜಾಗದಲ್ಲಿಯೇ ವಿಷ್ಣು ಪುಣ್ಯಭೂಮಿಮಾಡಬೇಕುಎಂಬುದು ಅಭಿಮಾನಿಗಳ ಒತ್ತಾಯವಾಗಿತ್ತು.
ಈ ವಿಚಾರವಾಗಿ ಕಳೆದ 11 ವರ್ಷ ಗಳಿಂದ ವಿಷ್ಣು ಅಭಿಮಾನಿಗಳು ಹಾಗೂ ಅಭಿಮಾನ್ ಸ್ಟುಡಿಯೋ ಮಾಲೀಕರಾದ ಹಿರಿಯ ನಟ ಬಾಲಕೃಷ್ಣ ಕುಟುಂಬದ ನಡುವೆ ಕಾನೂನು ಹೋರಾಟ ನಡೆಯುತ್ತಿತ್ತು.
ಈ ಮಧ್ಯೆ ಹಿರಿಯ ನಟಿ ಭಾರತಿ ವಿಷ್ಣು ವರ್ಧನ್ ಸೇರಿ ವಿಷ್ಣು ಕುಟುಂಬದವರು ಸಮಾಧಿ ಸ್ಥಳಕ್ಕಾಗಿ ನಡೆದ ಜಗಳದಿಂದ ನೊಂದು ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನೇ ನಿಲ್ಲಿಸಿದ್ದರು,
ರಾಜ್ಯ ಸರ್ಕಾರ ಮೈಸೂರಿನಲ್ಲಿ ಮಂಜೂರು ಮಾಡಿದ ಸ್ಥಳದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಿದರು. ಆದರೆ, ಅಭಿಮಾನಿಗಳು ಮಾತ್ರ ಅಂತ್ಯಕ್ರಿಯೆ ನಡೆದ ಜಾಗವೇ ತಮಗೆ ಮುಖ್ಯ ಎಂದು ಪಟ್ಟು ಹಿಡಿದಿದ್ದು, ಈ ವಿಚಾರ ಕೋರ್ಟ್ ಅಂಗಳಕ್ಕೆ ತಲುಪಿತ್ತು.
Leave a comment