ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ ಕರ್ನಾಟಕದ ವಿವಿಧ ಜಿಲ್ಲೆಗಳ 18 ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿದೆ. ಈ ವರ್ಷದ ಮೇ ತಿಂಗಳಲ್ಲಿ ಮಂಗಳೂರು ನಗರದ ಬಜ್ಪೆ ಪ್ರದೇಶದಲ್ಲಿ ಆರೋಪಿಗಳಾದ ಅಬ್ದುಲ್ ಸಫ್ವಾನ್ ಮತ್ತು ಇತರರು ಸುಹಾಸ್ ಶೆಟ್ಟಿ ಅವರನ್ನು ಸಾರ್ವಜನಿಕವಾಗಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಈ ಕೊಲೆ ಸಮಾಜದಲ್ಲಿ ಭಯೋತ್ಪಾದನೆಯನ್ನು ಹರಡುವ ಉದ್ದೇಶ ಹೊಂದಿತ್ತು ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್‌ನಲ್ಲಿ ಸ್ಥಳೀಯ ಪೊಲೀಸರಿಂದ ಪ್ರಕರಣದ ತನಿಖೆ ತನ್ನ ಹೆಗಲಿಗೆ ವಹಿಸಿಕೊಂಡ ಎನ್ಐಎ, ಶನಿವಾರ ಬಂಧಿತ 12 ವ್ಯಕ್ತಿಗಳು ಮತ್ತು ಪ್ರಕರಣದ ವಿವಿಧ ಶಂಕಿತರ ನಿವಾಸಗಳ ಮೇಲೆ ದಾಳಿ ನಡೆಸಿ, ಶೋಧಿಸಿದೆ.
ಮಂಗಳೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆಸಿದ ಶೋಧದಲ್ಲಿ 11 ಮೊಬೈಲ್ ಫೋನ್‌ಗಳು, 13 ಸಿಮ್ ಕಾರ್ಡ್‌ಗಳು ಮತ್ತು ಎಂಟು ಮೆಮೊರಿ ಕಾರ್ಡ್‌ಗಳು ಹಾಗೂ ಇತರ ಅಪರಾಧ ದಾಖಲೆಗಳು ಸೇರಿದಂತೆ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಮೇ 1 ರಂದು ಸುಹಾಸ್ ಶೆಟ್ಟಿ ತನ್ನ ಸಹಚರರೊಂದಿಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರು ಮತ್ತು ಪಿಕಪ್ ವಾಹನದಲ್ಲಿ ಬಂದ ಐದರಿಂದ ಆರು ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ, ಬರ್ಬರವಾಗಿ ಹತ್ಯೆ ಮಾಡಿದ್ದರು.
ಎನ್ಐಎ ಶೋಧ ಖಂಡಿಸಿದ ಎಸ್‌ಡಿಪಿಐ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯ ಹೆಸರಿನಲ್ಲಿ ಎಸ್‌ಡಿಪಿಐ ನಾಯಕರನ್ನು ಗುರಿಯಾಗಿಸಿಕೊಂಡು ಅವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಆರೋಪಿಸಿದೆ. “
ಇದು ದ್ವೇಷ ರಾಜಕೀಯ ಮತ್ತು ನಡೆಯುತ್ತಿರುವ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ” ಎಂದು ಎಸ್‌ಡಿಪಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
Leave a comment