‘ಡಿಜಿಟಲ್ ಅರೆಸ್ಟ್’ ವಂಚನೆ: ರಾಷ್ಟ್ರವ್ಯಾಪಿ ರೂ 40 ಕೋಟಿ ವಂಚಿಸಿದ ಆರೋಪಿ ಬಂಧನ ಕಾರವಾರ: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಮುಖ ಆರೋಪಿಯೊಬ್ಬನನ್ನು ಕಾರವಾರದ ಸಿ.ಇ.ಎನ್ ಅಪರಾಧ ಪೊಲೀಸರು ಬಿಹಾರದಲ್ಲಿ ಬಂಧಿಸಿದ ಘಟನೆ ನಡೆದಿದೆ.
ಆರೋಪಿ 11 ರಾಜ್ಯಗಳಲ್ಲಿ ಒಟ್ಟು ರೂ. 40.95 ಕೋಟಿಗೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬಯಲಾಗಿದೆ. ಪೂರ್ವ ಕರಾವಳಿಯ ವಿಲ್ಸನ್ ಫರ್ನಾಂಡಿಸ್‌ಗೆ ಡಿಹೆಚ್‌ಎಲ್ ಕೊರಿಯರ್ ಸರ್ವಿಸ್‌ನಿಂದ ಕರೆ ಮಾಡಿ, ಪಾರ್ಸೆಲ್‌ನಲ್ಲಿ ಮಾದಕವಸ್ತು ಇದೆ ಎಂದು ನಂಬಿಸಿ, ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಬೆದರಿಸಿ ರೂ. 3.80 ಲಕ್ಷ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ನಡೆಸಲಾಗಿತ್ತು
. ಈ ಕುರಿತು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಬಿಹಾರಕ್ಕೆ ತೆರಳಿ, ಅಲ್ಲಿನ ಪಾಟ್ನಾ ನಿವಾಸಿ ಹರ್ದೀಪ್ ಸಿಂಗ್ (39) ಎಂಬಾತನನ್ನು ಜುಲೈ 12, 2025 ರಂದು ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ.
ಬಂಧಿತ ಆರೋಪಿ ಹರ್ದೀಪ್ ಸಿಂಗ್ ಮೇಲೆ ದೇಶಾದ್ಯಂತ 29ಕ್ಕೂ ಹೆಚ್ಚು ಸೈಬರ್ ವಂಚನೆ ಮತ್ತು ಹೂಡಿಕೆ ವಂಚನೆ ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ, ಬೆಂಗಳೂರು ಸೇರಿ ಹಲವೆಡೆ ಕೋಟಿಗಟ್ಟಲೆ ಹಣ ವಂಚಿಸಿರುವುದು ದೃಢಪಟ್ಟಿದೆ.
ಆರೋಪಿಯು ವಿವಿಧ ಬ್ಯಾಂಕುಗಳಲ್ಲಿ 8 ಉಳಿತಾಯ ಖಾತೆ ಮತ್ತು 2 ಚಾಲ್ತಿ ಖಾತೆಗಳನ್ನು ಹೊಂದಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿ.ಇ.ಎನ್ ಅಪರಾಧ ಪೊಲೀಸರು ತಿಳಿಸಿದ್ದಾರೆ.