2006 ರ ಮುಂಬೈ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 12 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲಂಧಿಸಿ ಬಾಂಬೆ ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರನ್ನೊಳಗೊಂಡ ವಿಶೇಷ ಪೀಠವು ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸಿದೆ.
ಪೀಠವು ಎಲ್ಲ ಅಪರಾಧ ನಿರ್ಣಯಗಳನ್ನು ರದ್ದುಗೊಳಿಸಿದ್ದು, ಈ ಹಿಂದೆ ನೀಡಲಾದ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಗಳನ್ನು ಎತ್ತಿಹಿಡಿಯಲು ನಿರಾಕರಿಸಿದೆ. ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ.
ಆರೋಪಿಯೇ ಅಪರಾಧ ಮಾಡಿದ್ದಾನೆ ಎಂದು ನಂಬುವುದು ಕಷ್ಟ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ, ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿದ್ದರೆ ತಕ್ಷಣ ಬಿಡುಗಡೆ ಮಾಡಬೇಕು ಎಂದೂ ಸೂಚನೆ ನೀಡಿದೆ.
2006ರ ಜುಲೈ 11ರಂದು ಮುಂಬೈಯ ಪಶ್ಚಿಮ ರೈಲುಗಳಲ್ಲಿ 15 ನಿಮಿಷಗಳ ಅಂತರದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಒಟ್ಟು 180 ಮಂದಿ ಕೊನೆಯುಸಿರೆಳೆದಿದ್ದರು.
ಚರ್ಚ್ ಗೇಟ್ ಬೊರಿವಲಿ ರೈಲಿನಲ್ಲಿ 6.20ಕ್ಕೆ ಮೊದಲ ಸ್ಫೋಟ ಸಂಭವಿಸಿತ್ತು. ನಂತರ ಅದೇ ಸಮಯಕ್ಕೆ ಬಾಂದ್ರಾ- ಖಾರ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಸ್ಫೋಟವಾಗಿದ್ದು, ಇನ್ನುಳಿದಂತೆ ಜೋಗೇಶ್ವರಿ, ಮಾಹೀಂ, ಮೀರಾ ರೋಡ್-ಭಯಾಂದರ್, ಮಾಟುಂಗಾ-ಮಾಹೀಮ್ ಮತ್ತು ಬೊರಿವಲಿ ರೈಲುಗಳಲ್ಲಿ ಸ್ಫೋಟ ಸಂಭವಿಸಿತು.
ಪ್ರಕರಣದ ತನಿಖೆಯನ್ನು ಭಯೋತ್ಪಾದಕ ನಿಗ್ರಹ ದಳಕ್ಕೆ (ATS) ಹಸ್ತಾಂತರಿಸಿದ ಮೇಲೆ ಎಟಿಎಸ್ ಇಂಡಿಯನ್ ಮುಜಾಹಿದೀನ್ ಗೆ ಸೇರಿದ 13 ಜನರನ್ನು ಬಂಧಿಸಿತ್ತು.
ಕಮಲ್ ಅಹ್ಮದ್ ಅನ್ಸಾರಿ (37), ತನ್ವೀರ್ ಅಹ್ಮದ್ ಅನ್ಸಾರಿ (37), ಮೊಹಮ್ಮದ್ ಫೈಸಲ್ ಶೇಕ್ (36), ಇತೇಶಂ ಸಿದ್ದಿಕಿ (30), ಮೊಹಮ್ಮದ್ ಮಾಜಿದ್ ಶಫಿ (32), ಶೇಕ್ ಅಲಾಂ ಶೇಕ್ (41),
ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಜಾಮಿಲ್ ಶೇಕ್ (27), ಸೋಹಿಲ್ ಮೊಹಮ್ಮದ್ ಶೇಕ್ (43), ಜಮೀರ್ ಅಹ್ಮದ್ ಶೇಕ್ (36), ನಾವೆದ್ ಹುಸೇನ್ ಖಾನ್ (30) ಮತ್ತು ಆಸಿಫ್ ಖಾನ್ (38) ಬಂಧಿತರಾಗಿದ್ದರು