“ಅಬಕಾರಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಭಘೇಲ್ ಅವರ ಪುತ್ರ ಚೈತನ್ಯ ಭಘೇಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಇಡಿ ಅಧಿಕಾರಿಗಳು ಇಂದು ಬೆಳಗಿನ ಜಾವ ರಾಯ್ಪುರದ ಭಿಲಾಯಿ ಪಟ್ಟಣದಲ್ಲಿರುವ ಭೂಪೇಶ್ ಭಘೇಲ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಪ್ರಕರಣ ಸಂಬಂಧ ದಾಖಲೆಗಳು ಲಭ್ಯವಾದ ಬೆನ್ನಲ್ಲೇ ಜಾರಿ ನಿರ್ದೇಶಾನಲಯದ ಅಧಿಕಾರಿಗಳು, ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ಪರಿಶೀಲನೆ ಬಳಿಕ ಇದೀಗ ಇಡಿ ಅಧಿಕಾರಿಗಳು ಚೈತನ್ಯ ಭಘೇಲ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. ಇಡಿ ದಾಳಿ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭೂಪೇಶ್ ಭಘೇಲ್ ಅವರು, ಇ.ಡಿ ಅಧಿಕಾರಿಗಳು ಆಗಮಿಸಿದ್ದಾರೆ.
ಇಂದು ವಿಧಾನಸಭೆ ಅಧಿವೇಶದ ಕಡೆಯ ದಿನವಾಗಿದೆ. ಅದಾನಿಗಾಗಿ ತಮ್ನಾರ್‌ನಲ್ಲಿ ಮರಗಳನ್ನು ಕಡಿಯುತ್ತಿರುವ ವಿಚಾರವನ್ನು ಇಂದು ಪ್ರಸ್ತಾಪಿಸಬೇಕಿತ್ತು. ಆದರೆ, ಭಿಲಾಯಿ ನಿವಾಸಕ್ಕೆ ‘ಸಾಹೇಬ್’ ಇ.ಡಿಯನ್ನು ಕಳುಹಿಸಿದ್ದಾರೆಂದು ಹೇಳಿದ್ದಾರೆ.
ಚೈತನ್ಯ ಬಘೇಲ್ ಅವರ ನಿವಾಸದ ಮೇಲೆ ಇ.ಡಿ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ಮಾರ್ಚ್ ತಿಂಗಳಿನಲ್ಲಿಯೂ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.
ಇ.ಡಿ ಆರೋಪದ ಪ್ರಕಾರ, ಛತ್ತೀಸ್ಗಢ ಮದ್ಯ ಹಗರಣದಿಂದ ರಾಜ್ಯ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಿದೆ. ಇದರಿಂದ, 2,100 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ಆದಾಯ ಗಳಿಸುವ ಮೂಲಕ ಮದ್ಯದ ಸಿಂಡಿಕೇಟ್ ಶ್ರೀಮಂತವಾಗಿದೆ.
ಮದ್ಯ ಹಗರಣದ ಆದಾಯವನ್ನು ಚೈತನ್ಯ ಬಘೇಲ್ ಪಡೆದಿರುವ ಶಂಕೆ ಇದೆ ಎಂದು ಈ ಹಿಂದೆ ಜಾರಿ ನಿರ್ದೇಶನಾಲಯ ತಿಳಿಸಿತ್ತು.
2019 ಮತ್ತು 2022 ರ ನಡುವೆ ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಕ್ರಮ ನಡೆದಿದ್ದು, ತನಿಖೆಯ ಭಾಗವಾಗಿ ವಿವಿಧ ಆರೋಪಿಗಳಿಂದ ಸುಮಾರು 205 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದೆ.