“ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ಭಾರತದ ಎರಡನೇ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ’ ಎಂದು ಹೆಸರಿಡಲಾಗಿದೆ.
ಸೋಮವಾರ ನೂತನ ಸಿಗಂದೂರು ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಎಂದು ನಾಮಕರಣ ಮಾಡಲಾಗಿದೆ ಎಂದು ಘೋಷಿಸಿದರು.
ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ನಿರ್ಮಾಣಕ್ಕೆ ನಾನೇ ಭೂಮಿಪೂಜೆ ಮಾಡಿದ್ದೆ. ಇದೀಗ, ನಾನೇ ಉದ್ಘಾಟನೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಗಡ್ಕರಿ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್ಎನ್ ಚನ್ನಬಸಪ್ಪ, ಡಿಎಸ್ ಅರುಣ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೇತುವೆಗೆ ಹಲವು ಹೆಸರುಗಳು ಕೇಳಿ ಬಂದಿದ್ದವು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರು ಇಡಬೇಕು ಎಂದು ಕೆಲವರು ಹೈಕೋರ್ಟ್‌ಗೂ ಹೋಗಿದ್ದರು.
ಆದರೆ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ನೂತನ ಐತಿಹಾಸಿಕ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ’ ಹೆಸರನ್ನು ಇಡುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಕಡತದಲ್ಲಿಅಂಬಾರಗೋಡ್ಲು- ಕಳಸವಳ್ಳಿ ಸೇತುವೆ ಎಂದು ಇದ್ದರೂ, ಈ ಭಾಗದ ಬಹುಜನರ ಅಪೇಕ್ಷೆ ಮತ್ತು ಸಿಗಂದೂರು ಚೌಡೇಶ್ವರಿ ದೇವಿ ಕೃಪಾಶೀರ್ವಾದ ಎಲ್ಲರ ಮೇಲೆ ಇರಬೇಕು ಎಂಬ ಕಾರಣಕ್ಕೆ ಐತಿಹಾಸಿಕ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಬೇಕು ಎಂದು ತಿಳಿಸಿದ್ದರು.