“ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜುಲೈ 8ರವರೆಗೂ ಅವರನ್ನು ಬಂಧಿಸಿದಂತೆ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಶಾಲಿನಿ ರಜನೀಶ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಎನ್ ರವಿ ಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿತ್ತು.
ಜೆಪಿ ನಗರದ ನಂದಾದೀಪ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
ಈ ಎಫ್ ಐಆರ್ ನ್ನು ಪ್ರಶ್ನಿಸಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜುಲೈ 8ರವರೆಗೂ ರವಿಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ, ಬಂಧಿಸದಂತೆ ಪೊಲೀಸರಿಗೆ ಸೂಚಿಸಿದೆ.
ರವಿಕುಮಾರ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಮುಖ್ಯಮಂತ್ರಿಗಳು, ಸರ್ಕಾರ ಸ್ಪಂದಿಸುತ್ತಿಲ್ಲವೆಂಬ ಅರ್ಥದಲ್ಲಿ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಆದ್ರೆ, ಇದನ್ನು ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗಿದೆ ಎಂದು ಕೋರ್ಟ್ ಗೆ ತಿಳಿಸಿದರು. ವಿಡಿಯೋ ಕ್ಲಿಪ್ ನಲ್ಲಿ ಏನಿದೆ ಎಂದು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಪ್ರಶ್ನೆಗೆ ಅರುಣ್ ಶ್ಯಾಮ್ ವಿಡಿಯೋ ಕ್ಲಿಪ್ ಹಾಕಿ ತೋರಿಸಿದರು.
ಆದರೆ ಇದಕ್ಕೆ ಎಸ್ ಪಿಪಿ ಬಿ.ಎ.ಬೆಳ್ಳಿಯಪ್ಪ ಆಕ್ಷೇಪಿಸಿದ್ದು, ಅರ್ಜಿದಾರರು ಸಲ್ಲಿಸಿದ ವಿಡಿಯೋ ಕ್ಲಿಪ್ ಪರಿಗಣಿಸಬಾರದು ಎಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಜುಲೈ 8ರ ವರೆಗೆ ಬಂಧಿಸುವುದು ಬೇಡ.
ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಅಲ್ಲದೇ ತನಿಖೆಗೆ ಸಹಕರಿಸುವಂತೆ ರವಿಕುಮಾರ್ ಅವರಿಗೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.