“ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಡಬಲ್ ಬ್ಯಾರೆಲ್ ಗನ್ ಪ್ರದರ್ಶಿಸಿ ದರ್ಪ ತೋರಿರುವ ಘಟನೆಯೊಂದು ಸದಾಶಿವನಗರದಲ್ಲಿ ಸೋಮವಾರ ನಡೆದಿದೆ.
ತಮ್ಮ ಮನೆಯ ಮುಂದೆ ಕಂಟೈನರ್ ಲಾರಿಯೊಂದು ನಿಧಾನವಾಗಿ ಚಲಿಸಿದ್ದಕ್ಕೆ ಕೆರಳಿದ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಅವರು, ಏಕಾಏಕಿ ಗನ್ ಹಿಡಿದು ಬಂದು ಲಾರಿ ಚಾಲಕ ಮತ್ತು ಅಲ್ಲೇ ಇದ್ದ ಕಟ್ಟಡ ಕಾರ್ಮಿಕರಿಗೆ ಏರು ದನಿಯಲ್ಲಿ ಬೆದರಿಕೆ ಹಾಕಿದ್ದಾರೆ
. ಗೃಹ ಸಚಿವ ಜಿ ಪರಮೇಶ್ವರ ಅವರ ನಿವಾಸದ ಬಳಿಯೇ ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಯ ಈ ವರ್ತನೆಗೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಘಟನೆಯನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದುಸ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಬಳಿಕ ನಿವೃತ್ತ ಅಧಿಕಾರಿಯ ಗೂಂಡಾಗಿರಿ ವರ್ತನೆಗೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸದಾಶಿವನಗರ ಪೊಲೀಸರು ತಿಳಿಸಿದ್ದು, ಅಧಿಕಾರಿ ಬಂದೂಕನ್ನು ತೆಗೆದುಕೊಂಡು ಹೊರಬಂದಿದ್ದಾರೆ. ಈ ಬಗ್ಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.