ಬೆಂಗಳೂರು: ಕೃಷ್ಣರಾಜ ಸಾಗರ(ಕೆಆರ್‌ಎಸ್) ಜಲಾಶಯದ ಬಳಿ ಉದ್ದೇಶಿತ ಕಾವೇರಿ ಆರತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್,
ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಸಂಭಾವ್ಯ ಪರಿಸರ ಮತ್ತು ಸುರಕ್ಷತಾ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಅರ್ಜಿದಾರರಾದ ಸುನಂದಾ ಜಯರಾಮ್ ಪರವಾಗಿ ಹಾಜರಾದ ವಕೀಲ ರಾಜಣ್ಣ ಆರ್ ಅವರ ಪ್ರಾಥಮಿಕ ವಾದಗಳನ್ನು ಪರಿಗಣಿಸಿದ ನಂತರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್
ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ನೇತೃತ್ವದ ವಿಭಾಗೀಯ ಪೀಠ, ಎಲ್ಲಾ ಪ್ರತಿವಾದಿಗಳು ಎರಡು ವಾರಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ.
ಡ್ಯಾಮ್ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಅದರ ಕಾಮಗಾರಿಗೆ ಯಂತ್ರಗಳನ್ನು ಉಪಯೋಗಿಸಿರುವ ಫೋಟೊ ಸಹ ಸಲ್ಲಿಕೆ ಮಾಡಲಾಗಿದೆ.
ಕಾಮಗಾರಿಗೆ ಅಗೆಯುವುದರಿಂದ ಡ್ಯಾಂಗೆ ಹಾನಿಯಾಗುವುದಿಲ್ಲವೇ? ಜಲಾಶಯದ ಸುರಕ್ಷತೆ ಸಮಿತಿಯ ಅನುಮತಿ ಏಕೆ ಪಡೆದಿಲ್ಲ?
ಮನರಂಜನಾ ಪಾರ್ಕ್ ಕಾಮಗಾರಿಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ? ಕಾವೇರಿ ಪ್ರತಿಮೆ ಸ್ಥಾಪಿಸುವಾಗ ತಜ್ಞರ ಸಲಹೆ ಪಾಲಿಸಲಾಗಿದೆಯೇ ಎಂದು ಸರ್ಕಾರವನ್ನು ಹಾಗೂ ಕಾವೇರಿ ನೀರಾವರಿ ನಿಗಮವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ಸರ್ಕಾರ ಸದ್ಯಕ್ಕೆ ಕಾವೇರಿ ಪ್ರತಿಮೆ ಮಾತ್ರ ಸ್ಥಾಪಿಸಲು ಟೆಂಡರ್ ನೀಡಲಾಗಿದೆ. ಕಾವೇರಿ ಪ್ರತಿಮೆ ಸ್ಥಾಪನೆಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ. ಮನರಂಜನಾ ಪಾರ್ಕ್ ಟೆಂಡರ್ ಪೂರ್ಣಗೊಂಡಿಲ್ಲವೆಂದು ಹೈಕೋರ್ಟ್ಗೆ ತಿಳಿಸಿದೆ.
ಈ ಬೆಳವಣಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮನರಂಜನಾ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆಗಳಿಗೆ ತುಸು ಹಿನ್ನಡೆಯಾದಂತಾಗಿದೆ