ಶ್ರೀನಗರ: ಉಧಂಪುರ ಜಿಲ್ಲೆಯ ಬಸಂತ್‌ಗಢ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯುತ್ತಿದೆ.
ಭದ್ರತಾ ಪಡೆಗಳು ದೊಡ್ಡ ಯಶಸ್ಸನ್ನು ಸಾಧಿಸಿವೆ. ಸೇನೆಯು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು, ಮೂವರನ್ನು ಸುತ್ತುವರೆದಿದ್ದಾರೆ ಎಂದು ವರದಿಯಾಗಿದೆ.
ಎರಡೂ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಿದೆ. ಎನ್‌ಕೌಂಟರ್‌ನಲ್ಲಿ ಹತನಾದ ಭಯೋತ್ಪಾದಕ ಜೈಶ್-ಎ-ಮೊಹಮ್ಮದ್‌ಗೆ ಸೇರಿದವನು.
ಬಸಂತ್‌ಗಢದ ಬಿಹಾಲಿ ಪ್ರದೇಶದಲ್ಲಿ ಭಯೋತ್ಪಾದಕರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ತಮ್ಮನ್ನು ಸುತ್ತುವರೆದಿರುವುದನ್ನು ನೋಡಿದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಈ ಉಗ್ರನಿಗಾಗಿ ಭದ್ರತಾ ಪಡೆಗಳು ಒಂದು ವರ್ಷದಿಂದ ಹುಡುಕಾಟ ನಡೆಸುತ್ತಿತ್ತು ಎಂದು ತಿಳಿದುಬಂದಿದೆ.