thekarnatakatoday.com
Karavali Karnataka

ಮಂಗಳೂರಿನಲ್ಲಿ ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ – ತೈಲ, ರಾಸಾಯನಿಕ ನಿರ್ವಹಣಾ ಕೈಗಾರಿಕೆಗಳಿಗೆ ನಿಖರ, ಸುರಕ್ಷಿತ ವ್ಯವಸ್ಥೆಗಾಗಿ ಈ ನೂತನ ಸೌಲಭ್ಯ

ಮಂಗಳೂರು,  ‘ಎಸ್‌ಎಸ್ ಮೆಟಲ್ಸ್ ಆಂಡ್ ಇಂಡಸ್ಟ್ರೀಸ್‌’ನ ಅತ್ಯಾಧುನಿಕ ಟ್ಯಾಂಕರ್ ಮಾಪನಾಂಕ ನಿರ್ಣಯ ಘಟಕ ಮಂಗಳವಾರ ನಗರದಲ್ಲಿ ಉದ್ಘಾಟನೆಗೊಂಡಿದೆ.

ಮಂಗಳೂರಿನ ಓಷನ್ ಪರ್ಲ್ ಹೊಟೇಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಈ ಘಟಕವು ಮಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಬೃಹತ್ ತೈಲ, ರಾಸಾಯನಿಕ ನಿರ್ವಹಣೆ ಮಾಡುವ ಕೈಗಾರಿಕೆಗಳಿಗೆ ನಿಖರತೆ, ಸುರಕ್ಷತೆ ಮತ್ತು ನಿಯಂತ್ರಕ ಕ್ರಮಗಳನ್ನು ಅನುಸರಿಸಲು ಪೂರಕವಾಗಲಿದೆ

. ಉದ್ಘಾಟನಾ ಸಮಾರಂಭದಲ್ಲಿ ಉದ್ಯಮದ ಮುಖಂಡರು ಮತ್ತು ಧಾರ್ಮಿಕ ನಾಯಕರು ಪಾಲ್ಗೊಂಡಿದ್ದರು. ಬೆಂಗಳೂರಿನ ಸೈಂಟ್ ಆಂಡ್ರ್ಯೂಸ್ ಚರ್ಚ್‌ನ ವಂ.ಡಾ. ಡೆಕ್ಸ್ಟರ್ ಎಸ್. ಮಾಬೆನ್, ಜೋನಸ್ ಗ್ರೂಪ್‌ನ ನಿರ್ದೇಶಕ ಸುನಿಲ್ ಎ. ಜೋನಸ್, ಎಸ್‌ಎಸ್ ಮೆಟಲ್ಸ್‌ ನಿರ್ದೇಶಕಿ ಸಂಧ್ಯಾ ದೀಪಾ ಜೋನಸ್ ಭಾಗವಹಿಸಿದ್ದರು.

ಪ್ರಮುಖ ಉದ್ಯಮ ಪ್ರತಿನಿಧಿಗಳಾದ ಎಂಆರ್‌ಪಿಎಲ್‌ನ ಜಿಜಿಎಂ (ಎಚ್‌ಆರ್) ಕೃಷ್ಣ ಹೆಗ್ಡೆ ಮಿಯಾರ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಕಾರ್ಯ ನಿರ್ವಾಹಕ ನಿರ್ದೇಶಕ ಸಂಜಯ್ ಪರಾಶರ್, ಶೈನಿ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥಾಪಕ ಸ್ಟ್ಯಾನಿ ಲಿಯೋ ನೊರೊನ್ಹಾ ಉಪಸ್ಥಿತರಿದ್ದರು

. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿಸಿಎಲ್), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್), ಶೆಲ್ ಮತ್ತು ನಯಾರಾ ಎನರ್ಜಿ ಸೇರಿದಂತೆ ಪ್ರಮುಖ ತೈಲ ಮತ್ತು ಇಂಧನ ಕಂಪೆನಿಗಳ ಪ್ರಮುಖ ವ್ಯಕ್ತಿಗಳು ನೂತನ ಘಟಕದ ಮಹತ್ವದ ಕುರಿತು ಬೆಳಕು ಚೆಲ್ಲಿದರು.

ಇದೇ ಸಂದರ್ಭದಲ್ಲಿ, ಎಂಆರ್‌ಪಿಎಲ್‌ ಕಾರ್ಯ ನಿರ್ವಾಹಕ ನಿರ್ದೇಶಕ (ರಿಫೈನರಿ) ಬಿ. ಸುದರ್ಶನ್ ಅವರನ್ನು ಅವರ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು. ಜೋನಸ್ ಗ್ರೂಪ್‌ನ ಪ್ರಮುಖ ಉದ್ಯಮವಾದ ಎಸ್‌ಎಸ್ ಮೆಟಲ್ಸ್‌ನ್ನು ಸಂಧ್ಯಾ ದೀಪಾ ಜೋನಸ್ ಸ್ಥಾಪಿಸಿದ್ದು, ಉದ್ಯಮ ವಲಯದ ನಾವೀನ್ಯತೆ ಮತ್ತು ಅಭಿವೃದ್ಧಿಗೆ ಅಡಿಪಾಯ ಹಾಕಿದೆ.

2020ರಲ್ಲಿ ಎಸ್‌ಎಸ್ ಮೆಟಲ್ಸ್ ಮತ್ತು ಇಂಡಸ್ಟ್ರೀಸ್ ಅತ್ಯಾಧುನಿಕ ಎಫ್ಲುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್ (ಇಟಿಪಿ) ಜತೆಗೆ ಸುಧಾರಿತ- ಸ್ವಯಂಚಾಲಿತ ಶುದ್ಧೀಕರಣ ಘಟಕವನ್ನು ಪ್ರಾರಂಭಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿತ್ತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕೃತಗೊಳಿಸಿದ ಈ ನವೀನ ಸೌಲಭ್ಯವು ಕರ್ನಾಟಕದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಟಿಪಿಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಟ್ಯಾಂಕ್ ತೊಳೆಯಲು ಪರಿಣಾಮಕಾರಿಯಾಗಿ ಮರುಬಳಕೆ ಮಾಡಲಾಗುತ್ತದೆ,

ಇದು ಸಿಹಿನೀರಿನ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಪರಿಸರ ಸ್ನೇಹಿಯೂ ಆಗಿದೆ. ಕಂಪೆನಿಯು ಇದೀಗ ಟ್ಯಾಂಕರ್ ಮಾಪನಾಂಕ ನಿರ್ಣಯ ಘಟಕ ಆರಂಭಿಸುವುದರೊಂದಿಗೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಅತ್ಯಾಧುನಿಕ ಸೌಲಭ್ಯವು ಮಂಗಳೂರು ಮತ್ತು ವಿವಿಧೆಡೆ ಬೃಹತ್ ತೈಲ ಮತ್ತು ರಾಸಾಯನಿಕಗಳನ್ನು ನಿರ್ವಹಿಸುವ ವ್ಯವಹಾರಗಳಿಗೆ ಮೂಲಾಧಾರವಾಗಲಿದೆ.

ಈ ಸೌಲಭ್ಯವು ಸಾಟಿಯಿಲ್ಲದ ನಿಖರತೆ ಒದಗಿಸಲಿದೆ ಎಂದು ಸಂಧ್ಯಾ ಜೋನಾಸ್ ಅವರು ಘಟಕದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಾಸಾಯನಿಕಗಳನ್ನು ನಿರ್ವಹಿಸುವ ಕೈಗಾರಿಕೆಗಳಿಗೆ ಟ್ಯಾಂಕರ್ ಮಾಪನಾಂಕ ನಿರ್ಣಯದ ಪ್ರಕ್ರಿಯೆ ಅತ್ಯಂತ ಅನಿವಾರ್ಯ

. ಕಾನೂನು ಅನುಸರಣೆ, ದೃಢವಾದ ಗುಣಮಟ್ಟ, ನ್ಯಾಯಯುತ ವ್ಯಾಪಾರ ಅಭ್ಯಾಸಗಳು ಮತ್ತು ಪರಿಸರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನಿಖರವಾದ ಮಾಪನ ಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ ಹೊಸ ಘಟಕವು ವೈವಿಧ್ಯಮಯ ಶ್ರೇಣಿಯ ಟ್ಯಾಂಕರ್‌ಗಳಿಗೆ ವಿಶ್ವಾಸಾರ್ಹ ಮತ್ತು ಹೆಚ್ಚು ನಿಖರವಾದ ಮಾಪನಾಂಕ ನಿರ್ಣಯ ಸೇವೆ ಒದಗಿಸಲು ಸಜ್ಜಾಗಿದೆ.

ಜೋನಸ್ ಗ್ರೂಪ್‌ ಕುರಿತು: 1991ರಲ್ಲಿ ಸೇಂಟ್ ಅಲೋಶಿಯಸ್‌ ಕಾಲೇಜಿನಲ್ಲಿ ಪಿಯು ಶಿಕ್ಷಣದ ಬಳಿಕ ಪಿವಿ ಪೈನಲ್ಲಿ ಅಪ್ರೆಂಟಿಸ್ ತರಬೇತಿಯನ್ನು ಪಡೆದ ಸುನಿಲ್ ಎ. ಜೋನಸ್ ಅವರು ಆರಂಭದಲ್ಲಿ ಎನ್‌ಜಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌, ಬಳಿಕ 2001ರವರೆಗೆ ಗಲದಾರಿ ಆಟೋಮೊಬೈಲ್ಸ್ ದುಬೈನಲ್ಲಿ ಕಾರ್ಯ ನಿರ್ವಹಿಸಿ ಕೌಶಲ್ಯ ಮತ್ತು ನಾಯಕತ್ವ ಅನುಭವಗಳನ್ನು ಪಡೆದುಕೊಂಡರು

. 2001ರಲ್ಲಿ ಸುನಿಲ್‌ ಜೋನಸ್‌ ಉದ್ಯಮವಲಯಕ್ಕೆ ಕಾಲಿರಿಸಿದ್ದು, ಸನ್ನಿಧಿ ಎಂಟರ್‌ಪ್ರೈಸಸ್ ಪ್ರಾರಂಭಿಸಿದರು. 2002ರಲ್ಲಿ ಸಂಧ್ಯಾ ದೀಪಾ ಜೋನಸ್ ಅವರೊಂದಿಗೆ ವಿವಾಹವಾಗಿದ್ದು, ಬಳಿಕ ಇವರು ವ್ಯವಹಾರ ಪಾಲುದಾರರಾದರು. 2003ರಿಂದ 2008ರವರೆಗೆ ಗಣಿಗಾರಿಕೆ ಮತ್ತು ಸಾರಿಗೆ ಕ್ಷೇತ್ರಕ್ಕೆ ತಮ್ಮ ಉದ್ಯಮವನ್ನು ವಿಸ್ತರಿಸಿದರು.

2006ರಲ್ಲಿ ಸಂಧ್ಯಾ ದೀಪಾ ಜೋನಸ್‌ ಅವರು ಕುಟುಂಬದ ಪ್ರಮುಖ ಉದ್ಯಮವಾದ ಎಸ್‌ಎಸ್ ಮೆಟಲ್ಸ್‌ನ್ನು ಸ್ಥಾಪಿಸಿ ಹೊಸತನದ ಉದ್ಯಮಕ್ಕೆ ಅಡಿಪಾಯ ಹಾಕಿದರು. 2010ರಲ್ಲಿ ಜೋನಸ್ ಪೆಟ್ರೋ ಪ್ರಾಡಕ್ಟ್ಸ್ ಆರಂಭಿಸಿದರು.

ಈ ಕಂಪೆನಿಯು ಕರಾವಳಿ ಕರ್ನಾಟಕದ ಏಕೈಕ ಕೆಎಸ್‌ಪಿಸಿಬಿ- ಅಧಿಕೃತ ತ್ಯಾಜ್ಯ ತೈಲ ನಿರ್ವಹಣಾ ಕಂಪೆನಿಯಾಗಿದೆ. ಇದೀಗ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ

Related posts

ಉಡುಪಿಯಲ್ಲಿ ಗಾಂಧಿ ಭಾರತ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಸಮಾವೇಶ

The Karnataka Today

ಜಿಲ್ಲೆಯಾದ್ಯಂತ ಸರಕಾರದ ಹೆಸರು ಕೆಡಿಸುವಂತ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಸ್ಪದ ನೀಡುವುದಿಲ್ಲ- ಕೃಷ್ಣ ಶೆಟ್ಟಿ ಬಜಗೋಳಿ 

The Karnataka Today

ಉಡುಪಿ ಸರಕಾರಿ ಜಿಮ್ ನಲ್ಲಿ ಹೊಡೆದಾಟ ದೂರು ಪ್ರತಿ ದೂರು ದಾಖಲು

The Karnataka Today

Leave a Comment