ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲು ಸೇರಿದ್ದ ನಟ ದರ್ಶನ್ ಆಪ್ತ ಗೆಳತಿ ಪವಿತ್ರಾ ಗೌಡ ಇಂದು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಕಳೆದ ಶುಕ್ರವಾರ ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು.
ನಿನ್ನೆ ಜಾಮೀನು ಪ್ರಕ್ರಿಯೆಗಳು ಎಲ್ಲಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಎಲ್ಲಾ ಆರೋಪಿಗಳು ತಲಾ 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ಕೋರ್ಟ್ ವಿಧಿಸಿದೆ.
ಜೈಲಿಂದ ಬಿಡುಗಡೆಯಾದ ಕೂಡಲೇ ಪವಿತ್ರಾ ಗೌಡ ತನ್ನ ತವರು ಆನೆಕಲ್ ತಾಲ್ಲೂಕಿನ ತಲಘಟ್ಟಪುರದ ವಜ್ರಮುನೇಶ್ವರ ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದ್ದಾರೆ. ದೇಗುಲದಲ್ಲಿ ತೀರ್ಥಸ್ನಾನ ಮಾಡಿ, ಹಣೆಗೆ ವಿಭೂತಿ ಹಚ್ಚಿ, ಶ್ವೇತವಸ್ತ್ರ ಧರಿಸಿ ಪೂಜೆ ಸಲ್ಲಿಸಿದ್ದಾರೆ
. ತಲಘಟ್ಟಪುಪುರದ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ ನಟಿ ಭೇಟಿ ನೀಡಿದ್ದ ವೇಳೆ ದರ್ಶನ್ ಹೆಸರಲ್ಲಿ ಪವಿತ್ರಾ ತಾಯಿ ಅರ್ಚನೆ ಮಾಡಿಸಿದ್ದಾರೆ.
ಪೂಜೆ ಸಲ್ಲಿಸುವ ವೇಳೆ ಕುಟುಂಬಸ್ಥರ ಹೆಸರಿನ ಜೊತೆ ದರ್ಶನ್ ಹೆಸರನ್ನು ಕೂಡ ತಾಯಿ ಭಾಗ್ಯ ಹೇಳಿ ಅರ್ಚನೆ ಮಾಡಿಸಿದ್ದಾರೆ. ಈ ವೇಳೆ, ದೇಗುಲದಲ್ಲಿ ನಟಿ ಕಣ್ಣೀರಿಟ್ಟಿದ್ದಾರೆ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇದೀಗ ಆರ್‌ಆರ್ ನಗರದ ನಿವಾಸದತ್ತ ಪವಿತ್ರಾ ಕುಟುಂಬ ತೆರಳಿದ್ದಾರೆ.