“ತ್ರಿಪುರಾ ರಾಜಧಾನಿ ಅಗರ್ತಲಾದ ತನ್ನ ಅಸಿಸ್ಟೆಂಟ್ ಹೈ ಕಮಿಷನ್ ಕಚೇರಿ ಮೇಲಿನ ದಾಳಿಗೆ ಸೋಮವಾರ ತೀವ್ರ ಪ್ರತಿಭಟನೆ ದಾಖಲಿಸಿದ್ದ ಬಾಂಗ್ಲಾದೇಶ ಮಂಗಳವಾರ ಈ ಸಂಬಂಧ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಸಮನ್ಸ್ ನೀಡಿದೆ.
“ನಾವು ನಮ್ಮ ಕಳವಳವನ್ನು ವ್ಯಕ್ತಪಡಿಸಲು ಅವರಿಗೆ(ವರ್ಮಾ) ವಿದೇಶಾಂಗ ಸಚಿವಾಲಯಕ್ಕೆ ಬರುವಂತೆ ತಿಳಿಸಲಾಗಿತ್ತು”
ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಅಗರ್ತಲಾ ಘಟನೆಯ ನಂತರ ಭಾರತೀಯ ರಾಯಭಾರಿಯನ್ನು ವಿದೇಶಾಂಗ ಕಚೇರಿಗೆ ಬರುವಂತೆ ತಿಳಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಈ ಹಿಂದೆ ಹೇಳಿದ್ದರು.
ಮತ್ತೊಂದೆಡೆ, ಭಾರತ, ಬಾಂಗ್ಲಾದೇಶದೊಂದಿಗೆ “ಸ್ಥಿರವಾದ, ರಚನಾತ್ಮಕ ಸಂಬಂಧ” ಹೊಂದಲು ಬಯಸುತ್ತದೆ. ಯಾವುದೇ ಒಂದು ಸಮಸ್ಯೆಯು ದ್ವಿಪಕ್ಷೀಯ ಸಂಬಂಧಗಳಿಗೆ ಅಡ್ಡಿಯಾಗಬಾರದು ಎಂದು ವರ್ಮಾ ತಿಳಿಸಿದ್ದಾರೆ.
ನಾವು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ” ಎಂದು ಅವರು ಹಂಗಾಮಿ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಹಮೀದುಲ್ಲಾ ಅವರೊಂದಿಗಿನ ಸಭೆಯಿಂದ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಬಾಂಗ್ಲಾದೇಶ ಗಡಿಯಲ್ಲಿರುವ ಈಶಾನ್ಯ ರಾಜ್ಯ ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಹಿಂದೂ ಮುಖಂಡ ಚಿನ್ಮೋಯ್ ಕೃಷ್ಣದಾಸ್ ಅವರ ಬಂಧನವನ್ನು ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿತ್ತು.
ಈ ವೇಳೆ ಜನರ ಗುಂಪೊಂದು ಅಸಿಸ್ಟೆಂಟ್ ಹೈ ಕಮಿಷನ್ ಕಚೇರಿ ಆವರಣಕ್ಕೆ ನುಗ್ಗಿ ಗೇಟ್, ಧ್ವಜಸ್ತಂಭ ಹಾಳು ಮಾಡಿತ್ತು. ಈ ಘಟನೆಗೆ ಭಾರತ ಸೋಮವಾರ “ತೀವ್ರ ವಿಷಾದ” ವ್ಯಕ್ತಪಡಿಸಿತ್ತು.
ಪ್ರತಿಭಟನಾಕಾರರು ಬಾಂಗ್ಲಾದೇಶದ ಸಹಾಯಕ ಹೈಕಮಿಷನ್‌ಗೆ ನುಗ್ಗಿ ವಿಧ್ವಂಸಕ ಕೃತ್ಯವೆಸಗಿದ್ದಾರೆ ಎಂದು ವರದಿಯಾದ ಗಂಟೆಗಳ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ವಿಷಾದ ವ್ಯಕ್ತಪಡಿಸಿತ್ತು.