“ಪಕ್ಷದ ರಾಜ್ಯಾಧ್ಯಕ್ಷನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತನಗೆ ಅವಕಾಶ ನೀಡಿದ ಬಿಜೆಪಿ ಪಕ್ಷಕ್ಕೆ ಇವತ್ತು ಒದಗಿಬಂದಿರುವ ಸ್ಥಿತಿ ಒಂದು ದುರಂತ ಹಾಗೂ ನೋವಿನ ಸಂಗತಿ ಎಂದು ರಾಜ್ಯದ ಬಿಜೆಪಿಯ ಬಣ ಸಂಘರ್ಷಕ್ಕೆ ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಂದು ತಂಡ ನಡೆಸುತ್ತಿರುವ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ಹೈಕಮಾಂಡ್ ಗೆ ಎರಡು ಬಾರಿ ಪತ್ರ ಬರೆದರೂ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.
ತಮ್ಮ ಪತ್ರಗಳ ಹೊರತಾಗಿಯೂ ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ನಾಯಕರು ಮಧ್ಯಪ್ರವೇಶಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಗಳು ನಡೆದಿವೆ, ಚುನಾವಣೆಗಳು ದೊಡ್ಡ ಸವಾಲಾಗಿರುವುದರಿಂದ, ಚುನಾವಣೆಗಳಿಲ್ಲದ ರಾಜ್ಯಗಳಲ್ಲಿ ಪಕ್ಷದ ಸಮಸ್ಯೆಗಳನ್ನು ಬದಿಗಿಡುವುದು ಸಹಜ.ಹಾಗಾಗಿ ಸ್ವಲ್ಪ ವಿಳಂಬವಾಗಬಹುದು
, ಆದರೆ ಇನ್ನೂ ಮುಂದಾದರೂ ಪಕ್ಷದೊಳಗಿನ ಗುಂಪುಗಾರಿಕೆ ಬಗ್ಗೆ ಹೈಕಮಾಂಡ್‌ನ ಮೌನ ಮುರಿಯಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದು ಹೈಕಮಾಂಡ್, ಅವರನ್ನ ವಿರೋಧ ಮಾಡುವವರು ದೆಹಲಿಗೆ ಹೋಗಿ ಮಾತನಾಡಬೇಕು.
ಅದು ಬಿಟ್ಟು ಬೀದರ್ ನಲ್ಲಿ ನಿಂತು ತಮಟೆ ಬಾರಿಸುತ್ತಿದ್ದಾರೆ. ಅವರು ಎಲ್ಲರು ಹೈಕಮಾಂಡ್ ಗೆ ಹತ್ತಿರ ಇರೋರೇ. ಈಗ ಬೀದಿಯಲ್ಲಿ ಮಾತನಾಡ್ತಿದ್ದಾರೆ ಅಂದರೆ ಅವರು ಯೋಗ್ಯರಲ್ಲ ಎಂದು ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಡಿವಿಎಸ್ ಕಿಡಿಕಾರಿದ್ದಾರೆ. ನಾನು ಎರಡು ಪತ್ರಗಳನ್ನು ಬರೆದಿದ್ದೇನೆ,
ಆದರೆ ಎರಡು ಪತ್ರಕ್ಕೂ ಉತ್ತರವಿಲ್ಲ, ಕೇಂದ್ರ ನಾಯಕತ್ವವು ಇಲ್ಲಿನ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ದಕ್ಷಿಣ ಭಾರತಕ್ಕೆ ಬಿಜೆಪಿಯ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟಿರುವ ಕರ್ನಾಟಕವು ಇಂದು ಹಲವಾರು ಬಾಗಿಲುಗಳನ್ನು ಹೊಂದಿದೆ (ಒಳಗಿನ ಗುಂಪುಗಳನ್ನು ಉಲ್ಲೇಖಿಸಿ) ಇದು ದೊಡ್ಡ ದುರಂತ ಎಂದು ಅವರು ಹೇಳಿದರು.
ಯತ್ನಾಳ್ ಮತ್ತು ಜಾರಕಿಹೊಳಿ ಅವರು ವಿಜಯೇಂದ್ರ ಅವರನ್ನು ಬಹಿರಂಗವಾಗಿ ಟೀಕಿಸಿದ್ದಾರೆ, ಅವರು ಆಡಳಿತಾರೂಢ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಜಯೇಂದ್ರ ಮತ್ತು ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಪಕ್ಷವನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ದಿವಂಗತ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ನೇತೃತ್ವದ ಬಣಗಳ ನಡುವೆ ಪಕ್ಷದಲ್ಲಿ ಹಿಂದೆ ಹೆಚ್ಚು ಗುಂಪುಗಾರಿಕೆ ಇತ್ತು ಎಂಬುದನ್ನು ಸ್ಮರಿಸಿದ ಗೌಡರು, ಅವರಿಬ್ಬರ ನಡುವಿನ ಬಿರುಕು ಬೀದಿಗೆ ಬಂದಿರಲಿಲ್ಲ.
ಕರ್ನಾಟಕ ಬಿಜೆಪಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷದೊಳಗಿನ ಆಂತರಿಕ ಗೊಂದಲಗಳು ಬೀದಿಗೆ ಬಂದಿರುವುದು ನೋವಿನ ಸಂಗತಿ. ಪರಿಸ್ಥಿತಿಯನ್ನು ಸರಿಮಾಡಲು,ನಾನು ಸೇರಿದಂತೆ ರಾಜ್ಯದಲ್ಲಿ ಪಕ್ಷದ ಹಿರಿಯ ನಾಯಕರೆಂದು ಕರೆಸಿಕೊಳ್ಳುವ ಯಾರೊಬ್ಬರೂ ಇಲ್ಲಿಲ್ಲ. ಕೆಲವರು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿಲ್ಲ, ಹೀಗಾಗಿ ಹೈಕಮಾಂಡ್ ಮಧ್ಯಪ್ರವೇಶಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಗಳಿಗೆ ‘ಚಿನ್ನದ ಬಟ್ಟಲಿನಲ್ಲಿ’ ವಿಷಯಗಳನ್ನು ನೀಡುತ್ತಿದ್ದರೂ, ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಅದನ್ನು ಮರೆಮಾಚುತ್ತಿವೆ ಮತ್ತು ಇದು ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಗೌಡ ಹೇಳಿದರು.
ಈಗ ನನಗೆ ಪಕ್ಷದ ಕೋರ್ ಕಮಿಟಿಯ ಭಾಗವಾಗಿರುವುದನ್ನು ಬಿಟ್ಟು ಬೇರೆ ಯಾವುದೇ ಜವಾಬ್ದಾರಿ ಇಲ್ಲ, ಪಕ್ಷದ ಪರಿಸ್ಥಿತಿಯನ್ನು ನೋಡಿದರೆ ನನಗೆ ನೋವಾಗಿದೆ, ಇದು ದೊಡ್ಡ ದುರಂತ ಎಂದರು. ದೆಹಲಿ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಪಕ್ಷದ ವ್ಯವಹಾರಗಳ ಬಗ್ಗೆ “ಗಂಭೀರವಾಗಿ ಪರಿಗಣಿಸವಂತೆ” ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ ಮಾಜಿ ಸಿಎಂ, ಶಿಸ್ತಿನ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಪಕ್ಷ ಮತ್ತೊಮ್ಮೆ ಒಗ್ಗೂಡಲಿದೆ ಎಂದರು. ರಾಜ್ಯದ ಜನರು ಬಿಜೆಪಿಯನ್ನು ಬಯಸುತ್ತಿದ್ದಾರೆ. ಶಿಗ್ಗಾಂವ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರಸ್ತಾಪಿಸಿದ ಗೌಡರು, ಜನರು ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಚರ್ಚಿಸುತ್ತಿಲ್ಲ, ಆದರೆ ಬಿಜೆಪಿಯಲ್ಲಿನ ವಿಭಜನೆ ಮತ್ತು ಗುಂಪುಗಾರಿಕೆಯ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.