“ಶಬರಿಮಲೆ ದೇವಸ್ಥಾನದಿಂದ ವಾಪಸ್ ಬರುತ್ತಿದ್ದ ಕರ್ನಾಟಕದ ಅಯ್ಯಪ್ಪಸ್ವಾಮಿ ಭಕ್ತರು ಪ್ರಯಾಣಿಸುತ್ತಿದ್ದ ಬಸ್ ಕೇರಳದ ವಯನಾಡಿನ ತಿರುನೆಲ್ಲಿ ಬಳಿ ಮಂಗಳವಾರ ಬೆಳಗ್ಗೆ ಪಲ್ಟಿಯಾಗಿದ್ದು, ಅಪಘಾತದಲ್ಲಿ 27 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರು ಮಕ್ಕಳು ಸೇರಿದಂತೆ 45 ಜನರಿದ್ದ ಬಸ್ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ, ಮೈಸೂರಿನ ಹುಣಸೂರಿಗೆ ಹಿಂದಿರುಗುವಾಗ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ತಕ್ಷಣವೇ ವಯನಾಡಿನ ಮಾನಂತವಾಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಗಾಯಗೊಂಡ ಎಲ್ಲಾ ಪ್ರಯಾಣಿಕರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆ ಮಂಡಲ ಮಹೋತ್ಸವ ಹಾಗೂ ಮಕರಜ್ಯೋತಿ ಉತ್ಸವ ಶುಕ್ರವಾರ(ನವೆಂಬರ್ 15) ಸಂಜೆಯಿಂದಲೇ ಆರಂಭಗೊಂಡಿದ್ದು, ಶನಿವಾರದಿಂದ(ನವೆಂಬರ್ 16) ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.”