ಬಗರ್ ಹುಕುಂ ಅರ್ಜಿ ವಿಲೇವಾರಿಗೆ ನವೆಂಬರ್ 25ರ ಗಡುವು ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ

3

“ಬಗರ್ ಹುಕುಂ ಸಂಬಂಧಿತ ಅರ್ಜಿಗಳನ್ನು ನ.25ರೊಳಗೆ ತೆರವುಗೊಳಿಸಬೇಕು, ಆದೇಶ ಪಾಲನೆಯಾಗದಿದ್ದಲ್ಲಿ ಎಲ್ಲರಿಗೂ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಖಡಕ್ ಸೂಚನೆ ನೀಡಿದ್ದಾರೆ.

ಬಗರ್ ಹುಕುಂ ಅರ್ಜಿ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ತಹಶೀಲ್ದಾರ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ಸಂವಾದ ನಡೆಸಿದರು. ಬಗರ್ ಹುಕುಂ ಬಡವರ ಕೆಲಸ. ಬಡ ರೈತರಿಗೆ ಶೀಘ್ರ ಭೂ ಮಂಜೂರು ಮಾಡಬೇಕು ಎಂದು ರೈತಪರ ಸಂಘಟನೆಗಳು ದಶಕಗಳಿಂದ ಹೋರಾಡುತ್ತಿವೆ.

ಈ ಬಗ್ಗೆ ಸರ್ಕಾರಕ್ಕೂ ಬದ್ಧತೆ ಇದ್ದು, ರೈತ ಹೋರಾಟಗಾರರ ದ್ವನಿಗೆ ಕಿವಿಗೊಡುವ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಉತ್ತರದಾಯಿತ್ವ ನನ್ನ ಮೇಲೂ ಇದೆ ಎಂದು ಹೇಳಿದರು, ಬಗರ್ ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂಬ ಕಾರಣದಿಂದಲೇ ನಾನು ಕಳೆದ ಒಂದು ವರ್ಷದಿಂದ ವ್ಯಯಕ್ತಿಕವಾಗಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದ್ದೇನೆ.

ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ವಿಷಾದನೀಯ. ಬಡವರ ಕೆಲಸದ ಬಗ್ಗೆ ಅಧಿಕಾರಿ ವರ್ಗದಿಂದ ಈ ಮಟ್ಟದ ಅಸಡ್ಡೆಯನ್ನು ನಾನು ನಿರೀಕ್ಷಿಸಿರಲಿಲ್ಲ.

ರಾಜ್ಯದ ಒಟ್ಟಾರೆ 14 ಲಕ್ಷ ರೈತರು ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳ ಪೈಕಿ ಅರ್ಹ ಅರ್ಜಿ ಯಾವುದು? ಅನರ್ಹ ಅರ್ಜಿ ಯಾವುದು? ಎಂದು ಪರಿಶೀಲಿಸಲು ಅಧಿಕಾರಿಗಳಿಗೆ ಒಂದೂವರೆ ವರ್ಷ ಬೇಕಾ? ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿಗಳು ನ.26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು ಎಂದು ತಾಕೀತು ಮಾಡಿದರು.

ಮಾಲೂರು ತಾಲ್ಲೂಕಿನಲ್ಲಿ ಬಗರ್‌ ಹುಕುಂ ಅಡಿ ಭೂ ಮಂಜೂರಾತಿ ಕೋರಿ 10,771 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೆ ಸ್ಥಳ ಪರಿಶೀಲನೆಗೊಂಡಿರುವ ಅರ್ಜಿಗಳ ಸಂಖ್ಯೆ ಕೇವಲ 55 ಮಾತ್ರ.

ಸಭೆಯ ಆರಂಭದಲ್ಲೇ ರಮೇಶ್‌ ಅವರ ಜತೆ ಮಾತನಾಡಲು ಸಚಿವರು ಯತ್ನಿಸಿದರು. ಆದರೆ, ಅವರು ಸಭೆಗೆ ಒಂದು ಗಂಟೆ ತಡವಾಗಿ ಹಾಜರಾದರು. ಸಚಿವರ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಲಿಲ್ಲ. ರಮೇಶ್‌ ಅವರಿಗೆ ತಕ್ಷಣ ಶೋಕಾಸ್‌ ನೊಟೀಸ್‌ ಜಾರಿಗೊಳಿಸುವಂತೆ ಸಚಿವರು ಸೂಚನೆ ನೀಡಿದರು.

ಬಗರ್‌ ಹುಕುಂ ಅರ್ಜಿ ವಿಲೇವಾರಿ ಸೇರಿದಂತೆ ಕಂದಾಯ ಇಲಾಖೆಯ ಬಹುತೇಕ ಕೆಲಸಗಳಲ್ಲಿ ಮೈಸೂರು ಜಿಲ್ಲೆ ಹಿಂದುಳಿದಿದ್ದು, ಮೈಸೂರು ಕಳಪೆ ಜಿಲ್ಲೆಯಾಗುತ್ತಿದೆ. ಅಧಿಕಾರಿಗಳೇ ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಶೇಕಡ 80ರಷ್ಟು ಬಗರ್‌ ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತಹಶೀಲ್ದಾರ್‌ ಶ್ರೀಧರ್ ಶೇಖರ್ ಮತ್ತು ಮುಂಡಗೋಡು ತಾಲ್ಲೂಕು ತಹಶೀಲ್ದಾರ್‌ ಶಂಕರ್‌ ಗೌಡಿ ಅವರನ್ನು ಕಂದಾಯ ಸಚಿವರು ಸಭೆಯಲ್ಲಿ ಪ್ರಶಂಸಿಸಿದರು.

ಕೆಲಸ ಮಾಡಿ ಎಂದರೆ ಬಗರ್‌ ಹುಕುಂ ಆ್ಯಪ್ ಸಹಕರಿಸುತ್ತಿಲ್ಲ ನೆಟ್‌ವರ್ಕ್‌ ಇಲ್ಲ ಎಂದು ಸಲ್ಲದ ಕಾರಣ ನೀಡುವವರೇ ಹೆಚ್ಚು. ಆದರೆ, ನೆಟ್‌ವರ್ಕ್‌ ಇಲ್ಲದೇ ಇದ್ದರೂ ಗುಡ್ಡಗಾಡು ಪ್ರದೇಶದ ಈ ಅಧಿಕಾರಿಗಳು ಹೇಗೆ ಶೇ.80ರಷ್ಟು ಬಗರ್‌ ಹುಕುಂ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಯಿತು? ಈ ರೀತಿ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡುವವರನ್ನು ಮುಂದಿನ ತಿಂಗಳಲ್ಲಿ ಬೆಂಗಳೂರಿಗೆ ಆಹ್ವಾನಿಸಿ ಸನ್ಮಾನಿಸುತ್ತೇನೆ ಎಂದು ಹೇಳಿದರು.

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ ಪ್ರಕರಣ: ಮೃತದೇಹಗಳ ಅಸ್ತಿಪಂಜರ ಪತ್ತೆ ಕಾರ್ಯಾಚರಣೆಗೆ ಜಿಪಿಆರ್ ಬಳಕೆಗೆ ಆಗ್ರಹ

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗೆ ಜಿಪಿಆರ್ ಬಳಕೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ....

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ  ಜೈಲು ಶಿಕ್ಷೆ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ...

ಧರ್ಮಸ್ಥಳ ಅಪರಿಚಿತ ಸಾವಿನ ಪ್ರಕರಣದ ಯುಡಿಆರ್ ಮಾಹಿತಿ ಡಿಲೀಟ್ ಬೆಳ್ತಂಗಡಿ ಪೊಲೀಸರ ಮೇಲೆ ಸಂಶಯದ ನೆರಳು

“ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ...

ಎಮ್ಮೆ ಕಟ್ಟುತ್ತಿದ್ದ ಶೆಡ್ ದ್ವಂಸ ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ ಶಾಸಕರ ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ

ತೆಲಂಗಾಣ: ಜಾನುವಾರಗಳ ಶೆಡ್ ಧ್ವಂಸಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ರೈತ ದಂಪತಿ, ಕಾಂಗ್ರೆಸ್ ಶಾಸಕ...