
ಧಾರವಾಡ-ಕಲಘಟಗಿ ಮಧ್ಯೆ ಇರುವ ಯರಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿರುವ 33 ಎಕರೆ ಪೈಕಿ 13 ಎಕರೆ ಭೂಮಿ ಖರಾಬು ಇತ್ತು. ಇದನ್ನು ಮಾರ್ಪಾಟು ಮಾಡಿಕೊಡಲು 50 ಲಕ್ಷ ರೂ. ಲಂಚ ಮತ್ತು ಅದೇ ಭೂಮಿಯ ಪೈಕಿ 2 ಎಕರೆ ಜಮೀನು ನುಂಗಲು ತಹಶೀಲ್ದಾರ್ ಹೊಂಚು ಹಾಕಿದ್ದರು ಎನ್ನಲಾಗಿದೆ.
ಲೋಕಾಯುಕ್ತ ಎಸ್.ಪಿ.ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ಮಾಡಿತು.ಈ ವೇಳೆ ದೂರುದಾರರು ಕೂಡ ಅವರ ಜೊತೆಗೆ ಇದ್ದರು. ಡಿಎಸ್ ಪಿ ರವೀಂದ್ರ ಕುರುಬಗಟ್ಟಿ, ಇನ್ಸಪೆಕ್ಟರ್ ಪ್ರಸಾದ್, ಕರುಣೇಶಗೌಡ, ಪ್ರಸಾದ ಪಾನೇಕರ್ ಸೇರಿದಂತೆ ಇತರರು ಭ್ರಷ್ಟ ತಹಶೀಲ್ದಾರ್ ಬೇಟೆಯಾಡಿದ್ದಾರೆ. 

ಬಾಗಲಕೋಟೆಯ ಮಂಜುನಾಥ ಅರಳಿಕಟ್ಟಿ ಎಂಬುವವರು ಧಾರವಾಡದ ಯರಿಕೊಪ್ಪ ಹದ್ದಿನಲ್ಲಿ ಖರೀದಿಸಿದ್ದ ಜಮೀನಿನ ಖರಾಬು ಪಹಣಿ ಸರಿಪಡಿಸಲು ಈ ಲಂಚಕ್ಕೆ ತಹಶೀಲ್ದಾರ ಬೇಡಿಕಿ ಇಟ್ಟಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಕರ್ನಾಟಕ ಕಾಲೇಜು ಆವರಣದಲ್ಲಿಯೇ ಈ ಲಂಚ ಪಡೆಯುವಾಗ ಸಚ್ಚಿದಾನಂದ ಕುಚನೂರು ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಸಚ್ಚಿದಾನಂದ ಕುಚನೂರ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 
ಜಮೀನು ದಾಖಲೆ ಸರಿಪಡಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ 50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ, ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರು. 
ಪೂಜೆಯ ಜೊತೆಗೆ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು. ಅನ್ನ ಸಂತರ್ಪಣೆಗಾಗಿ ಕಚೇರಿಯಲ್ಲಿ ಭರದ ಸಿದ್ಧತೆ ನಡೆದಿತ್ತು. ರಾತ್ರಿಯೇ ಅಡುಗೆ ಮಾಡಲು ಬಟ್ಟರು ಬಂದಿದ್ದರು. ಸುಮಾರು ಎರಡು ಸಾವಿರ ಜನರಿಗೆ ಅಡುಗೆ ಸಿದ್ದವಾಗಿತ್ತು.
Leave a comment