ರಷ್ಯಾದಿಂದ ಭಾರತಕ್ಕೆ ಆಮದು ಆಗುವ ಕಚ್ಚಾ ತೈಲದ ಪ್ರಮಾಣದಲ್ಲಿ ಶೇ. 10ರಷ್ಟು ಇಳಿಕೆಯಾಗಿದ್ದರೂ ಸಹ ರಷ್ಯಾ ಅತಿ ದೊಡ್ಡ ಪೂರೈಕೆದಾರನಾಗಿ ಮುಂದುವರಿದಿದೆ

23

ಸೆಪ್ಟೆಂಬರ್‌ನಲ್ಲಿ ದಿನಕ್ಕೆ 45 ಲಕ್ಷ ಬ್ಯಾರೆಲ್‌ಗಳಿಗೂ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಂಡ ಭಾರತ ಇದರಲ್ಲಿ ಶೇ. 34ರಷ್ಟಿದೆ ರಷ್ಯಾದ ಪಾಲು, ಮೊದಲ 8 ತಿಂಗಳಿಗೆ ಹೋಲಿಸಿದರೆ ಶೇ. 10ರಷ್ಟು ಇಳಿಕೆ ಅಮೆರಿಕದ ನಿರ್ಬಂಧ ಕಾರಣಕ್ಕೆ ಇಳಿಕೆ ಕಂಡಿಲ್ಲ ತೈಲ ಆಮದು, ಮಾರುಕಟ್ಟೆ ಪರಿಸ್ಥಿತಿಯೇ ಇದಕ್ಕೆ ಕಾರಣ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಭಾರತ ಮುಂದುವರಿಸಿದೆ.

ಹೊಸದಿಲ್ಲಿ: ಕಳೆದ ಎಂಟು ತಿಂಗಳುಗಳಲ್ಲಿ ರಷ್ಯಾದಿಂದ ಭಾರತಕ್ಕೆ ಆಮದು ಆಗುವ ಕಚ್ಚಾ ತೈಲದ ಪ್ರಮಾಣದಲ್ಲಿ ಶೇ. 10ರಷ್ಟು ಇಳಿಕೆಯಾಗಿದೆ. ಆದರೂ ಇಂದಿಗೂ ರಷ್ಯಾ ದೇಶದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಮುಂದುವರಿದಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ ಭಾರತದ ಒಟ್ಟು ಆಮದಿನಲ್ಲಿ ರಷ್ಯಾದ ಪಾಲು ಶೇ. 34ರಷ್ಟಿದೆ ಎಂದು ಸರಕು ಮತ್ತು ಹಡಗು ಮಾರುಕಟ್ಟೆಗಳ ಅಂಕಿ – ಅಂಶ ನೀಡುವ ಸಂಸ್ಥೆ ‘ಕೆಪ್ಲರ್’ ವರದಿ ಹೇಳಿದೆ.

ಈ ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಭಾರತವು ದಿನಕ್ಕೆ 45 ಲಕ್ಷ ಬ್ಯಾರೆಲ್‌ಗಳಿಗಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ದಿನಕ್ಕೆ 70,000 ಬ್ಯಾರೆಲ್‌ಗಳಷ್ಟು ಹೆಚ್ಚಾಗಿದ್ದರೂ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಆಗಿಲ್ಲ.

ಒಟ್ಟು ಆಮದಿನಲ್ಲಿ ರಷ್ಯಾದ ಪಾಲು ದಿನಕ್ಕೆ 16 ಲಕ್ಷ ಬ್ಯಾರೆಲ್‌ಗಳಷ್ಟಿದ್ದು, ಇದು ಒಟ್ಟಾರೆ ಆಮದಿನ ಶೇ. 34ರಷ್ಟಾಗುತ್ತದೆ. ಆದರೆ, 2025ರ ಮೊದಲ ಎಂಟು ತಿಂಗಳ ಸರಾಸರಿ ಆಮದಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ರಷ್ಯಾದಿಂದ ಬರುವ ತೈಲದ ಪ್ರಮಾಣ ದಿನಕ್ಕೆ 1.80 ಲಕ್ಷ ಬ್ಯಾರೆಲ್‌ಗಳಷ್ಟು ಕಡಿಮೆಯಾಗಿದೆ.”

ಈ ಆಮದು ಇಳಿಕೆಗೆ ಅಮೆರಿಕದ ಸುಂಕದ ಬೆದರಿಕೆ ಅಥವಾ ಐರೋಪ್ಯ ರಾಷ್ಟ್ರಗಳ ಟೀಕೆ ಕಾರಣವಲ್ಲ ಎಂದಿರುವ ವರದಿಯು, ಇದಕ್ಕೆ ಸಂಪೂರ್ಣವಾಗಿ ಮಾರುಕಟ್ಟೆ ಪರಿಸ್ಥಿತಿಗಳಷ್ಟೇ ಕಾರಣ ಎಂದು ವಿವರಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿದ್ದಂತೆ, ರಷ್ಯಾದ ಕಚ್ಚಾ ತೈಲದ ಮೇಲಿನ ರಿಯಾಯಿತಿ ಪ್ರತಿ ಬ್ಯಾರೆಲ್‌ಗೆ ಸುಮಾರು 2 ಡಾಲರ್‌ಗೆ ಇಳಿದಿದೆ. ಇದರಿಂದಾಗಿ ಭಾರತೀಯ ಸಂಸ್ಕರಣಾಗಾರಗಳು ಈಗ ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದಂತಹ ಇತರ ಮೂಲಗಳಿಂದ ತೈಲ ಖರೀದಿಸಲು ಮುಂದಾಗಿವೆ.

ಇದರ ಜೊತೆಗೆ, ಮಳೆಗಾಲದಲ್ಲಿ ದೇಶದ ಅತಿದೊಡ್ಡ ಇಂಧನವಾದ ಡೀಸೆಲ್‌ಗೆ ಬೇಡಿಕೆ ಕಡಿಮೆಯಾಗಿದ್ದೂ ಸಹ ರಷ್ಯಾದ ತೈಲದಿಂದ ಕೊಂಚ ವಿಮುಖವಾಗಲು ಕಾರಣವಾಗಿದೆ.

ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಇಂಡಿಯನ್ ಆಯಿಲ್ ಅಧ್ಯಕ್ಷ ಅರವಿಂದರ್‌ ಸಿಂಗ್ ಸಾಹ್ನಿ, “ನಾವು ಸಂಪೂರ್ಣವಾಗಿ ಆರ್ಥಿಕತೆಯನ್ನು ಆಧರಿಸಿ ಕಚ್ಚಾ ತೈಲವನ್ನು ಖರೀದಿಸುತ್ತೇವೆ. ಯಾವುದೇ ದೇಶದಿಂದ ಆಮದು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ವಿಶೇಷ ಪ್ರಯತ್ನ ಏನೂ ಮಾಡುವುದಿಲ್ಲ. ಬೆಲೆ ಮತ್ತು ಅದರಿಂದ ಸಿಗುವ ಲಾಭಾಂಶವನ್ನು ಆಧರಿಸಿ ನಮ್ಮ ಆಯ್ಕೆ ನಿರ್ಧಾರವಾಗುತ್ತದೆ,” ಎಂದು ಹೇಳಿದ್ದರು.

ಆಮದು ಸ್ವಲ್ಪ ಕಡಿಮೆಯಾಗಿದ್ದರೂ, ಮುಂಬರುವ ಹಬ್ಬದ ಋತುವಿನಲ್ಲಿ (ಅಕ್ಟೋಬರ್-ಡಿಸೆಂಬರ್) ಇಂಧನ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ, ಇತರ ಆಯ್ಕೆಗಳಿಗೆ ಹೋಲಿಸಿದರೆ ರಷ್ಯಾದ ತೈಲವು ಭಾರತೀಯ ಸಂಸ್ಕರಣಾಗಾರಗಳಿಗೆ ಅತ್ಯಂತ ಮಿತವ್ಯಯಕಾರಿ ಆಯ್ಕೆಯಾಗಿಯೇ ಮುಂದುವರಿಯಲಿದೆ ಎಂದು ಕೆಪ್ಲರ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

Leave a comment

Leave a Reply

Your email address will not be published. Required fields are marked *

Related Articles

ಮೆಗಾ ರಫೆಲ್ ಜೆಟ್ ಯೋಜನೆಗೆ ‘ಕೇಂದ್ರ’ ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂದೂರ್...

ಮುಂಬೈ ನೂತನ ಮೇಯರ್‌ ರೀತು ತಾವಡೆ ಅವಿರೋಧ ಆಯ್ಕೆ: 40ವರ್ಷ್ ಗಳ ನಂತರ ಬಿಜೆಪಿಗೆ ಒಲಿದ ಪಟ್ಟ

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ...

ಸ್ವಪಕ್ಷ ಸರಕಾರದ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಪಾಟ್ನಾ: ನೇರವಾಗಿ ಪ್ರಶ್ನೆ ಕೇಳುವುದರಲ್ಲಿ ಹೆಸರಾದ ಬಿಹಾರದ ಬಿಜೆಪಿಯ ಅತ್ಯಂತ ಕಿರಿಯ ಶಾಸಕಿ ಮೈಥಿಲಿ ಠಾಕೂರ್...

ಬಿಜೆಪಿಯಿಂದ ನಮಗೆ ಅಚ್ಚೆದಿನ್ ಬಂದಿಲ್ಲ ಬೆಂಬಲಿಸಿದ ಎಲ್ಲರಿಗೂ ರಾಮ ಮಂದಿರ ನಿರ್ಮಾಣವಾಗಿ ಲಾಭವಾಗಿದೆ :: ಮೋಹನ್ ಭಾಗವತ್

“ನವದೆಹಲಿ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು (UCC) ರೂಪಿಸಬೇಕು ಮತ್ತು ಅದು ವಿಭಜನೆಗೆ...