“ಪಾಕಿಸ್ತಾನ ಸೇನೆಗೆ ತಲೆನೋವಾಗಿದ್ದ ಬಲೂಚ್ ಲಿಬರೇಶನ್ ಆರ್ಮಿ ಯನ್ನು ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಅಮೆರಿಕ ಘೋಷಣೆ ಮಾಡಿದೆ.
ಹೌದು.. ಅಮೆರಿಕವು ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸೋಮವಾರ ತಿಳಿಸಿದೆ.
ಅಂದಹಾಗೆ ಮಜೀದ್ ಬ್ರಿಗೇಡ್ ಎಂದೂ ಕರೆಯಲ್ಪಡುವ ಬಿಎಲ್‌ಎ, ಉತ್ತರದಲ್ಲಿ ಅಫ್ಘಾನಿಸ್ತಾನ ಮತ್ತು ಪಶ್ಚಿಮದಲ್ಲಿ ಇರಾನ್‌ನ ಗಡಿಯಲ್ಲಿರುವ ಪಾಕಿಸ್ತಾನದ ನೈಋತ್ಯ ಪ್ರಾಂತ್ಯವಾದ ಸ್ವತಂತ್ರ ಬಲೂಚಿಸ್ತಾನಕ್ಕಾಗಿ ಹೋರಾಡುತ್ತಿದೆ.
ಸ್ವತಂತ್ರ ಬಲೂಚಿಸ್ತಾನಕ್ಕಾಗಿ ಹೋರಾಟ ಮಾಡುತ್ತಿರುವ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಬಲೂಚ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆಯ ಮಾರಣ ಹೋಮವನ್ನೇ ನಡೆಸಿದೆ. ಪಾಕಿಸ್ತಾನದ ನೂರಾರು ಸೈನಿಕರನ್ನು ಹತ್ಯೆ ಮಾಡಿರುವ ಆರೋಪ ಬಿಎಲ್ಎ ಮೇಲಿದೆ.
ಈ ಹಿಂದೆ ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಭದ್ರತಾ ಪಡೆಗಳ ವಾಹನದ ಮೇಲೆ ಐಇಡಿ ಬಾಂಬ್ ದಾಳಿ ನಡೆಸಲಾಗಿತ್ತು.
ವಾಹನದಲ್ಲಿ ತೆರಳುತ್ತಿದ್ದ ಪಾಕಿಸ್ತಾನಿ ಸೈನಿಕರ ದೇಹಗಳು ಸ್ಫೋಟದ ನಂತರ ಗಾಳಿಯಲ್ಲಿ ಹಲವಾರು ಮೀಟರ್‌ಗಳಷ್ಟು ಹಾರಿರುವುದು ವೈರಲ್ ಆಗಿದ್ದ ವಿಡಿಯೋದಲ್ಲಿ ಕಾಣಿಸಿತ್ತು.
Leave a comment