ಭಾರತದ ವಾಯುಯಾನ ಭದ್ರತಾ ನಿಯಂತ್ರಕ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ(BCAS) ನೀಡಿದ ಸೇವಾ ಪರವಾನಗಿ ರದ್ದತಿ ಪ್ರಶ್ನಿಸಿ ಟರ್ಕಿಶ್ ಸಂಸ್ಥೆ ಸೆಲೆಬಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ದೇಶಾದ್ಯಂತ ಅನೇಕ ವಿಮಾನ ನಿಲ್ದಾಣಗಳಲ್ಲಿ ಸರಕು ಸಾಗಣೆ ಸೇವೆ ಒದಗಿಸುತ್ತಿದ್ದ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಚಿನ್ ದತ್ತ ಅವರು ಕಳೆದ ಮೇ 23 ರಂದು ತೀರ್ಪು ಕಾಯ್ದಿರಿಸಿದ್ದರು.
ಇಂದು ಟರ್ಕಿಶ್ ಕಂಪನಿಯ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಟರ್ಕಿ ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ ಮತ್ತು ಗಡಿಯುದ್ದಕ್ಕೂ ಭಾರತದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಖಂಡಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೇ 15 ರಂದು ‘ಸೆಲೆಬಿ’ಗೆ ನೀಡಿದ್ದ ಸುರಕ್ಷತಾ ಸಮ್ಮತಿಯನ್ನು ಹಿಂಪಡೆದಿತ್ತು.
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೆಲೆಬಿಯ ಸೇವೆ ಮುಂದುವರಿಸುವುದು ಭದ್ರತಾ ಅಪಾಯವನ್ನುಂಟುಮಾಡಬಹುದು ಎಂಬ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು
. ಪರವಾನಗಿ ರದ್ದು ಮಾಡಿದ ಪರಿಣಾಮವಾಗಿ ಸೆಲೆಬಿ ಏರ್‌ಪೋರ್ಟ್ ಸರ್ವೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 3,791 ಉದ್ಯೋಗಿಗಳಿಗೆ ತೊಂದರೆ ಉಂಟಾಗಲಿದೆ ಎಂದು ಕಂಪನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಜತೆಗೆ, ಕೇಂದ್ರವು ಪರವಾನಗಿ ರದ್ದತಿಗೂ ಮುನ್ನ ಯಾವುದೇ ಸುಳಿವು ನೀಡಿರಲಿಲ್ಲ. ಒಪ್ಪಂದವನ್ನು ಕೂಡ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿತ್ತು.